ಕಠ್ಮಂಡು: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. 320 ಭಾರತೀಯರು ಸೇರಿದಂತೆ 3,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರವಾಹದ ಭೀತಿ ಕೊಂಚ ಮಟ್ಟಿಗೆ ತಗ್ಗಿದೆ. ಆದರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಜನರ ಸ್ಥಿತಿ ಹೇಳತೀರದಾಗಿದೆ. ಅಗತ್ಯ ಮೂಲಸೌಕರ್ಯಗಳಿಲ್ಲದೆ, ಆಹಾರ, ಔಷಧಿಗಳಿಗಾಗಿ ಪರದಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸಹಾಯವಾಣಿಯನ್ನು ಆರಂಭಿಸಿದೆ. ಜನರು +977 985 131 6807 ಅಥವಾ +977 970 910 7500 ಈ ದೂರವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ನೇಪಾಳದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಯ ದಡದಲ್ಲಿರುವ ಗ್ರಾಮಗಳು ಹಾಗೂ ಪಟ್ಟಣಗಳ ಮೇಲೆ ಬುಧವಾರ ( ಆಗಸ್ಟ್ 26) ಸುನಾಮಿಯಂತೆ ಅಪ್ಪಳಿಸಿದ ಕೆಸರುಮಿಶ್ರಿತ ನೀರು ಹಲವಾರು ಕಟ್ಟಡಗಳು, ಮನೆಗಳನ್ನು ನುಂಗಿಹಾಕಿದೆ.
ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಭೂಕಂಪ ಕಾರಣವಲ್ಲ, ದೊಡ್ಡ ಪ್ರಮಾಣದಲ್ಲಿ ಹಿಮಬಂಡೆಗಳು ಕುಸಿದು ಪ್ರವಾಹ ಉಂಟಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (ಯುಎಸ್‌ಜಿಎಸ್) ಹೇಳಿದೆ.

