ವಾಷಿಂಗ್ಟನ್‌: ಅಮೆರಿಕದಲ್ಲೂ ಭೀಕರ ಪ್ರವಾಸ ಸಂಭವಿಸಿದೆ. ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 20 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಹಠಾತ್ ಪ್ರವಾಹವು ಬ್ರೈಟ್ ಏಂಜಲ್ ಕ್ಯಾನ್ಯನ್ ಮತ್ತು ಫ್ಯಾಂಟಮ್ ರಾಂಚ್ ಪ್ರದೇಶವನ್ನು ಅಪ್ಪಳಿಸಿತು. ದೊಡ್ಡ ಬಂಡೆಗಳು, ಲೋಹದ ರಚನೆಗಳು ಮತ್ತು ಇತರ ಭಗ್ನಾವಶೇಷಗಳು ಅದರ ಮೂಲಕ ಹರಿಯುವ ಕೊಲೊರಾಡೋ ನದಿಗೆ ನುಗ್ಗಿದವು ಎಂದು ರಾಷ್ಟ್ರೀಯ ಉದ್ಯಾನವನ ಸೇವೆ ತಿಳಿಸಿದೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ ಜನರನ್ನು ಸ್ಥಳಾಂತರಿಸಲು ಅರಿಜೋನಾ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ಸೇವೆ ತಿಳಿಸಿದೆ. ನಾಪತ್ತೆಯಾದವರ ಬಗ್ಗೆ ಮತ್ತು ಆ ಪ್ರದೇಶದಲ್ಲಿದ್ದ ಪಾದಯಾತ್ರಿಕರ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಸ್ಥಳೀಯರಿಗೆ ತಿಳಿಸಲಾಗಿದೆ.

ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಕೊಲೊರಾಡೋ ನದಿಗೆ ಹರಿಯುವ ಬ್ರೈಟ್ ಏಂಜೆಲ್ ಕ್ರೀಕ್‌ನಲ್ಲಿ ಹಠಾತ್ ಪ್ರವಾಹ ಪ್ರಾರಂಭವಾಯಿತು. ಧಾರಾಕಾರವಾಗಿ ಹರಿದ ನೀರು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಪಾದಚಾರಿ ಸೇತುವೆಗಳು ನಾಶವಾದವು.

ಕಡಿದಾದ ಕಲ್ಲಿನ ಪ್ರದೇಶದಲ್ಲಿ 30 ನಿಮಿಷಗಳಲ್ಲಿ ಸುಮಾರು ಅರ್ಧ ಇಂಚಿನಿಂದ 1 ಇಂಚಿನವರೆಗೆ (1 ಸೆಂಟಿಮೀಟರ್‌ನಿಂದ 2.5 ಸೆಂಟಿಮೀಟರ್‌ವರೆಗೆ) ಮಳೆಯಾಗಿದೆ ಎಂದು ಫ್ಲ್ಯಾಗ್‌ಸ್ಟಾಫ್‌ನಲ್ಲಿರುವ ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನಶಾಸ್ತ್ರಜ್ಞ ಜಸ್ಟಿನ್ ಜಾನ್ಡ್ರೋ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆಯ ಹೊತ್ತಿಗೆ, ಫ್ಯಾಂಟಮ್ ರಾಂಚ್‌ನಿಂದ 62 ಜನರನ್ನು ಸ್ಥಳಾಂತರಿಸಲಾಗಿದೆ. ಇದು ಐತಿಹಾಸಿಕ ಕ್ಯಾಂಟೀನ್ ಮತ್ತು ವಸತಿ ನಿಲಯಗಳನ್ನು ಹೊಂದಿದೆ. ಇತರರನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.