ಕ್ಯಾಲಿಫೋರ್ನಿಯಾ: ಅಮೆರಿಕದ ಟ್ರೇಡಿಂಗ್ ಕಂಪನಿಯಾದ ರಾಬಿನ್ಹುಡ್ ಮಾರ್ಕೆಟ್ಸ್ನ ಸಹ-ಸಂಸ್ಥಾಪಕ ಬೈಜು ಭಟ್ ತಮ್ಮ ಚೀಫ್ ಕ್ರಿಯೇಟಿವ್ ಆಫೀಸರ್ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಒಂದು ದಶಕದ ಕಾಲ ಕಂಪನಿಯ ಉನ್ನತ ಹುದ್ದೆಯಲ್ಲಿದ್ದು ಅದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ಮೂಲದ ಬೈಜು ಭಟ್ ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಕೆಲ ವರದಿ ಪ್ರಕಾರ ಅವರು ಬೇರೆ ಬಿಸಿನೆಸ್ಗಳನ್ನು ಆರಂಭಿಸುವ ಸಲುವಾಗಿ ರಾಬಿನ್ಹುಡ್ ಮಾರ್ಕೆಟ್ಸ್ನಿಂದ ನಿರ್ಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬೈಜು ಭಟ್ ಅವರು ರಾಬಿನ್ಹುಡ್ನ ನಿರ್ದೇಶಕ ಮಂಡಳಿಯಲ್ಲಿ ಸದಸ್ಯರಾಗಿ ಮುಂದುವರಿಯಲಿದ್ದಾರೆ. ವ್ಲಾದಿಮಿರ್ ಟೆನೆವ್ ಸಿಇಒ ಆಗಿ ಮುಂದುವರಿಯಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಬೈಜು ಪ್ರಫುಲ್ಕುಮಾರ್ ಭಟ್ ಅಮೆರಿಕದ ವರ್ಜೀನಿಯಾ ರಾಜ್ಯದಲ್ಲಿ ಹುಟ್ಟಿ ಬೆಳೆದವರು. ಇವರ ತಂದೆ ಮತ್ತು ತಾಯಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ನೆಲಸಿದವರು. ಬೈಜು ಸ್ಟಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸ್ಟಾನ್ಫೋರ್ಡ್ನಲ್ಲಿ ಓದುವಾಗ ಸಹಪಾಠಿಯಾಗಿದ್ದ ಬಲ್ಗೇರಿಯಾ ಮೂಲದ ವ್ಲಾದಿಮಿರ್ ಟೆನೆವ್ ಅವರ ಜೊತೆ ಸೇರಿ 2013ರಲ್ಲಿ ರಾಬಿನ್ಹುಡ್ ಎಂಬ ಟ್ರೇಡಿಂಗ್ ಪ್ಲಾಟ್ಫಾರ್ಮ್ ಆರಂಭಿಸಿದರು.