ಇಸ್ಲಾಮಾಬಾದ್: ಇಸ್ಲಾಂ ಧರ್ಮ ಗ್ರಂಥ ಕುರಾನ್‌ಗೆ ಅಪವಿತ್ರಗೊಳಿಸಿದ ಎಂಬ ಆರೋಪದಲ್ಲಿ ಉದ್ರಿಕ್ತ ಗುಂಪು ವ್ಯಕ್ತಿಯೊಬ್ಬನನ್ನು ಠಾಣೆಯಲ್ಲೇ ಶೂಟ್ ಮಾಡಿ ಕೊಂದಿರುವ ಘಟನೆ ಪಾಕಿಸ್ತಾನದ ಖೈಬರ್ ಫಕ್ತುನ್‌ಖ್ವಾ ಜಿಲ್ಲೆಯ ಸ್ವಾತ್ ತಾಲೂಕಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಕುರಾನ್ ಗ್ರಂಥಕ್ಕೆ ಅವಹೇಳನ ಮಾಡಿದ ಆರೋಪದದಲ್ಲಿ ವ್ಯಕ್ತಿಯೊಬ್ಬನನ್ನು ಮಧ್ಯಾನ್ ಸ್ಟೇಷನ್‌ನ ಪೊಲೀಸರು ಅರೆಸ್ಟ್ ಮಾಡಿ ಠಾಣೆಗೆ ಕರೆತಂದಿದ್ದರು. ಇದರ ಬೆನ್ನಲ್ಲೇ ಠಾಣೆ ಎದುರು ನೂರಾರು ಮಂದಿ ಜಮಾಯಿಸಿದ್ದು, ಆರೋಪಿಯನ್ನು ತಮ್ಮ ಕೈಗೊಪ್ಪಿಸುವಂತೆ ಜನ ಆಗ್ರಹಿಸಿದ್ದರು.
ಇದಕ್ಕೆ ಪೊಲೀಸರು ಒಪ್ಪದೇ ಇದ್ದಾಗ ಪೊಲೀಸರು ಮತ್ತು ಜನರ ನಡುವೆ ಭಾರೀ ಘರ್ಷಣೆ ಉಂಟಾಗಿತ್ತು. ಕೊನೆಗೆ ವಿಧಿಯಿಲ್ಲದೇ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದರು. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದನು. ಆತನನ್ನು ತಕ್ಷಣ ಮಧ್ಯಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದರಿಂದ ಮತ್ತಷ್ಟು ಉದ್ರಿಕ್ತಗೊಂಡ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದೆ. ಬಳಿಕ ಕೆಲವರು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಆರೋಪಿ ಶೂಟ್ ಮಾಡಿ ಕೊಂದು ಆತನ ಮೃತದೇಹವನ್ನು ಹೊರಗೆಳೆದು ಅದನ್ನು ಮರಕ್ಕೆ ನೇತು ಹಾಕಿ ವಿಕೃತಿ ಮೆರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಕೆಲವು ಪೊಲೀಸರಿಗೂ ಗಂಭೀರ ಗಾಯಗಳಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಹೀದುಲ್ಲಾ ಹೇಳಿದ್ದಾರೆ.

