ಮಾಸ್ಕೋ: ರಷ್ಯಾದ ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದ ಕರಾವಳಿಯಲ್ಲಿ ಶುಕ್ರವಾರ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ.

ರಷ್ಯಾದ ಸಾಮಾಜಿಕ ಮಾಧ್ಯಮದಲ್ಲಿ ಭೂಕಂಪಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗಿವೆ. ವೀಡಿಯೋದಲ್ಲಿ ಮನೆಗಳಲ್ಲಿನ ಪೀಠೋಪಕರಣಗಳು, ವಸ್ತುಗಳು ಅಲುಗಾಡುತ್ತಿರುವ ಹಾಗೂ ಪಾರ್ಕ್ ಮಾಡಿದ ಕಾರುಗಳು ಹಿಂದಕ್ಕೆ ಮತ್ತು ಮುಂದಕ್ಕೆ ತೂಗಾಡುತ್ತಿರುವ ದೃಶ್ಯಗಳನ್ನು ಕಾಣಬಹುದು.

ಪ್ರದೇಶದ ರಾಜಧಾನಿ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯಿಂದ ಪೂರ್ವಕ್ಕೆ 128 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ. 10 ಕಿಲೋಮೀಟರ್  ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಮಾಹಿತಿ ನೀಡಿದೆ. ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಹತ್ತಿರದ ಕರಾವಳಿಯಲ್ಲಿ ಅಪಾಯಕಾರಿ ಅಲೆಗಳು ಏಳಬಹುದು ಎಂದು ಎಚ್ಚರಿಸಿದೆ.