ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ಹೂಡಿದ್ದ ಆರೋಪದ ಮೇಲೆ ವಾಷಿಂಗ್ಟನ್ನಲ್ಲಿರುವ ಶ್ವೇತಭವನದ ಸಮೀಪ ವೆನೆಜುವೆಲಾ ಮೂಲದ ವ್ಯಕ್ತಿಯೊಬ್ಬನನ್ನು ಯುಎಸ್ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಬಂಧಿಸಿದ್ದಾರೆ.
ರೋನ್ನಿ ಯೋರ್ಡ್ರಿಕ್ಸ್ ಗುವಾನಿಪಾ ಚ್ರಿನೋಸ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ರಾಷ್ಟ್ರ ರಾಜಧಾನಿಯ ಕಾನ್ಸ್ಟಿಟ್ಯೂಷನ್ ಅವೆನ್ಯೂ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಈ ವ್ಯಕ್ತಿ ಅನುಮಾನನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ತನಿಖೆ ನಡೆಸಿದ ವೇಳೆ ಆ ಕಾರು ಕಳವು ಮಾಡಲಾಗಿರುವುದು ಪತ್ತೆಯಾಗಿದೆ. ಮಾತ್ರವಲ್ಲದೆ, ವಾಹನದೊಳಗೆ ಎಆರ್-15 ರೈಫಲ್, ಮ್ಯಾಕ್-10 ಸಬ್ಮಷಿನ್ ಗನ್ ಮತ್ತು ಗ್ಲಾಕ್ ಪಿಸ್ತೂಲ್ ಸೇರಿದಂತೆ ಮೂರು ಮಾರಕ ಬಂದೂಕುಗಳು ಹಾಗೂ ಹತ್ತಾರು ಸುತ್ತಿನ ಜೀವಂತ ಗುಂಡುಗಳು ಪತ್ತೆಯಾಗಿವೆ ಎಂದು ಭದ್ರತಾ ಇಲಾಖೆ (ಡಿಎಚ್ಎಸ್) ತಿಳಿಸಿದೆ.
ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆರೋಪಿಯು ತೀವ್ರ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದು, ತನ್ನ ತಲೆಯಲ್ಲಿ ಯಾರೋ ಧ್ವನಿಗಳು ಕೇಳಿಸುತ್ತಿದ್ದವು ಮತ್ತು ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ಆ ಧ್ವನಿಗಳು ತನಗೆ ನಿರ್ದೇಶನ ನೀಡಿದ್ದವು ಎಂದು ಒಪ್ಪಿಕೊಂಡಿದ್ದಾನೆ. ಈ ಗಂಭೀರ ಬೆದರಿಕೆಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ತಕ್ಷಣವೇ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿವೆ.
ಪ್ರಾಥಮಿಕ ತನಿಖೆಯಿಂದ ಆರೋಪಿ ರೋನ್ನಿ ಯೋರ್ಡ್ರಿಕ್ಸ್ ಗುವಾನಿಪಾ ಚ್ರಿನೋಸ್ ಅಮೆರಿಕಕ್ಕೆ ಕಾನೂನುಬಾಹಿರವಾಗಿ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ. ಈಚಿನ ವರ್ಷಗಳಲ್ಲಿ ಅಮೆರಿಕದ ಗಡಿಯನ್ನು ದಾಟಿ ದೇಶದೊಳಗೆ ಪ್ರವೇಶಿಸಿದ್ದ ಈ ವ್ಯಕ್ತಿಯ ವಿರುದ್ಧ ಈಗ ಅಕ್ರಮ ಶಸ್ತ್ರಾಸ್ತ್ರ ಸಾಗಾಟ, ಪರವಾನಗಿ ಇಲ್ಲದೆ ಬಂದೂಕುಗಳನ್ನು ಹೊಂದಿರುವುದು ಹಾಗೂ ವಾಹನ ಕಳವು ಮತ್ತು ಕಳವು ಮಾಡಿದ ಸೊತ್ತನ್ನು ಸ್ವೀಕರಿಸಿದ ಗಂಭೀರ ಆರೋಪಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಸದ್ಯ ಆತನನ್ನು ಕಾನೂನು ಕ್ರಮಕ್ಕಾಗಿ ಯುಎಸ್ ಮಾರ್ಷಲ್ಸ್ ಸರ್ವಿಸ್ ವಶಕ್ಕೆ ಒಪ್ಪಿಸಲಾಗಿದೆ.
ಶ್ವೇತಭವನದ ಸುತ್ತಮುತ್ತ ಹೆಚ್ಚುತ್ತಿರುವ ಭದ್ರತಾ ಆತಂಕಗಳು ಮತ್ತು ಮಾನಸಿಕ ಅಸ್ಥಿರತೆ ಹೊಂದಿರುವ ವ್ಯಕ್ತಿಗಳಿಂದ ಎದುರಾಗುವ ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ಸೀಕ್ರೆಟ್ ಸರ್ವಿಸ್ ಪಡೆಗಳು ಸಂಪೂರ್ಣ ಸಜ್ಜಾಗಿವೆ ಎಂಬುದಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್ ನಿರ್ದೇಶಕ ಶಾನ್ ಕರನ್ ತಿಳಿಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿವೆ.

