ನಸ್ಸೌ: ಬಹಾಮಾಸ್‌ನ ನಾರ್ತ್ ಆಂಡ್ರೋಸ್‌ನಲ್ಲಿ ಫ್ಲೆಮಿಂಗೊ ಏರ್ ಸೆಸ್ನಾ 402 ವಿಮಾನ ಪತನಗೊಂಡಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 10 ಮಂದಿ ಸಾವನ್ನಪ್ಪಿದ್ದಾರೆ.
ಅಧಿಕಾರಿಗಳು ವಿಮಾನ ಅಪಘಾತದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತಪಟ್ಟವರ ಗುರುತು ಪತ್ತೆಹಚ್ಚಲಾಗುತ್ತಿದೆ. ವಿಮಾನ ಪತನದ ಬಳಿಕ ಫ್ಲೆಮಿಂಗೊ ಏರ್ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬಹಾಮಾಸ್ ಪ್ರಧಾನಿ ಫಿಲಿಪ್ ಬ್ರೇವ್ ಡೇವಿಸ್, ವಿಮಾನ ಅಪಘಾತದಲ್ಲಿ ಓರ್ವ ವ್ಯಕ್ತಿ ಬದುಕುಳಿದಿದ್ದಾರೆ ಎಂದು ಹೇಳಿದ್ದರು. ಆದರೆ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರೂ ಸಹ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ಬಹಾಮಾಸ್‌ನ 53 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಈ ಹೊತ್ತಲ್ಲಿ ಸಂಭವಿಸಿದ 10 ಜನರ ದುರ್ಮರಣದಿಂದ ನಾವು ದುಃಖಿತರಾಗಿದ್ದೇವೆ ಎಂದಿದ್ದಾರೆ.
ಇದು ನಮಗೆ ಶೋಕದ ದಿನವಾಗಿದೆ. “ತಾವು ಪ್ರೀತಿಸುವ ಯಾರಾದರೂ ಮನೆಗೆ ಮರಳುವುದಿಲ್ಲ ಎಂಬ ಕಹಿ ಸುದ್ದಿಯನ್ನು ಸ್ವೀಕರಿಸಿದ ಪ್ರತಿಯೊಂದು ಕುಟುಂಬಕ್ಕೂ ನಾವು ಆಳವಾದ ಸಂತಾಪ ಸೂಚಿಸುತ್ತೇವೆ” ಎಂದಿದ್ದಾರೆ.
ವಿಮಾನವು ನಸ್ಸೌದಲ್ಲಿನ ಲಿಂಡೆನ್ ಪಿಂಡ್ಲಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಸ್ಯಾನ್ ಆಂಡ್ರೋಸ್‌ಗೆ ತೆರಳುತ್ತಿತ್ತು ಎಂದು ಬಹಮಾಯನ್ ವಿಮಾನ ಅಪಘಾತ ತನಿಖಾ ಪ್ರಾಧಿಕಾರ ತಿಳಿಸಿದೆ. ಅಪಘಾತದ ನಂತರ ವಿಮಾನಯಾನ ಸಚಿವಾಲಯವು ಫ್ಲೆಮಿಂಗೊ ಏರ್‌ನ ಏರ್ ಆಪರೇಟರ್ ಪ್ರಮಾಣಪತ್ರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

