ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿ ಕರಾವಳಿಯ ಅರಬ್ಬಿ ಸಮುದ್ರದ ಬಳಿ ಭಾರಿ ಪ್ರಮಾಣದ ಸರಕು ಸಾಗಣೆ ಮಾಡುತ್ತಿದ್ದ ಕಾರ್ಗೋ ವಿಮಾನವೊಂದು ನಿಗೂಢವಾಗಿ ನಾಪತ್ತೆಯಾಗಿದೆ.
ವಿಮಾನವು ರೇಡಾರ್ ಸಂಪರ್ಕದಿಂದ ಕಡಿತಗೊಂಡ ತಕ್ಷಣವೇ ಎಚ್ಚೆತ್ತ ಪಾಕಿಸ್ತಾನಿ ರಕ್ಷಣಾ ಸಂಸ್ಥೆಗಳು ಮತ್ತು ನೌಕಾಪಡೆ ಜಂಟಿಯಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.
ಐವರು ಸಿಬ್ಬಂದಿಯಿದ್ದ ಬೋಯಿಂಗ್ 737 ವಿಮಾನವು ಮಂಗಳವಾರ ರಾತ್ರಿ ಯುಎಇಯ ಶಾರ್ಜಾದಿಂದ ಟೇಕಾಫ್ ಆಗಿತ್ತು. ಎರಡು ಗಂಟೆ ಹಾರಾಟ ನಡೆಸಿದ ಬಳಿಕ ಪಾಕಿಸ್ತಾನದ ಕರಾಚಿ ಕರಾವಳಿಯಲ್ಲಿ ರೇಡಾರ್‌ನಿಂದ ಕಣ್ಮರೆಯಾಗಿದೆ.
ವಿಮಾನವು ಸ್ಥಳೀಯ ಸಮಯ ರಾತ್ರಿ 9:18 ರ ಸುಮಾರಿಗೆ ನ್ಯಾವಿಗೇಷನ್ ಸಿಸ್ಟಮ್ ಸಮಸ್ಯೆಯನ್ನು ವರದಿ ಮಾಡಿದೆ ಮತ್ತು ಕರಾಚಿ ಪ್ರದೇಶ ನಿಯಂತ್ರಣ ಕೇಂದ್ರದಿಂದ ಮಾರ್ಗದರ್ಶನ ಪಡೆಯಿತು ಎಂದು ತಿಳಿಸಿದೆ.
ವಿಮಾನವು ಸಂಪರ್ಕ ಕಳೆದುಕೊಳ್ಳುವ ಮುನ್ನ ನಿಯಂತ್ರಣ ಕೊಠಡಿಗೆ ಯಾವುದೇ ತುರ್ತು ಸಂದೇಶ ಅಥವಾ ಅಪಾಯದ ಸಂಕೇತಗಳನ್ನು ರವಾನಿಸಿರಲಿಲ್ಲ ಎಂದು ವರದಿಯಾಗಿದೆ. ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯದಿಂದಾಗಿ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ವಿಮಾನ ಪತನಗೊಂಡಿರಬಹುದು ಎಂದು ಶಂಕಿಸಲಾದ ಕರಾವಳಿ ಪ್ರದೇಶದ ಸುತ್ತಮುತ್ತ ಪಾಕಿಸ್ತಾನ ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಹೆಲಿಕಾಪ್ಟರ್‌ಗಳ ಮೂಲಕ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ಸಮುದ್ರದಲ್ಲಿ ಗಾಳಿ ಮತ್ತು ಅಲೆಗಳ ಅಬ್ಬರ ಹೆಚ್ಚಿರುವುದು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ.
ಕರಾಚಿ ಕರಾವಳಿಯಿಂದ ಕೆಲವು ನಾಟಿಕಲ್ ಮೈಲಿ ದೂರದಲ್ಲಿರುವ ಅರಬ್ಬಿ ಸಮುದ್ರದ ಮೇಲೆ ವಿಮಾನ ಹಾರಾಟ ನಡೆಸುತ್ತಿದ್ದಾಗ ಕೊನೆಯ ಬಾರಿಗೆ ರೇಡಾರ್‌ನಲ್ಲಿ ಕಾಣಿಸಿಕೊಂಡಿತ್ತು. ಹೀಗಾಗಿ ವಿಮಾನವು ಸಮುದ್ರದಲ್ಲೇ ಪತನಗೊಂಡಿರಬಹುದು ಎಂದು ಬಲವಾಗಿ ಶಂಕಿಸಲಾಗಿದೆ.

