ಉತ್ತರ ಕೊರಿಯಾ ದೇಶದ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ವಿಚಿತ್ರ ಕಾನೂನುಗಳನ್ನು ಪರಿಚಯಿಸುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇಲ್ಲಿನ ಸರ್ವಾಧಿಕಾರಿ ಆಡಳಿತವಿದ್ದು, ಸರ್ಕಾರ ಜಾರಿಗೊಳಿಸುವ ಪ್ರತಿಯೊಂದು ಕಾನೂನುಗಳನ್ನು ಇಲ್ಲಿನ ನಾಗರಿಕರು ಪಾಲಿಸಲೇಬೇಕಾಗುತ್ತದೆ.

ಇಲ್ಲದಿದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುವುದು ಖಂಡಿತ. ಇದೀಗ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಜುಲೈ ತಿಂಗಳ ಅಂತ್ಯದಲ್ಲಿ ಸಂಭವಿಸಿದ ಭಾರೀ ಪ್ರವಾಹದ ಕಾರಣ ಇಲ್ಲಿ ಅನೇಕ ಅವು ನೋವುಗಳು ಸಂಭವಿಸಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದ ಕೋಪಗೊಂಡ ಕಿಮ್‌ ಜಂಗ್‌ ಉನ್‌ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಉತ್ತರ ಕೊರಿಯಾದಲ್ಲಿ ಜುಲೈ ತಿಂಗಳ ಅಂತ್ಯದಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಭೂ ಕುಸಿತ ಮತ್ತು ಪ್ರವಾಹ ಉಂಟಾಗಿತ್ತು. ಈ ನೈಸರ್ಗಿಕ ವಿಕೋಪದ ಕಾರಣ ಹಲವಾರು ಸಾವು ನೋವುಗಳು ಸಂಭವಿಸಿದೆ. ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಕೋಪಗೊಂಡ ಕಿಮ್‌ ಜಾಂಗ್‌ ಉನ್‌ ಇಲ್ಲಿನ ಒಟ್ಟು 30 ಸರ್ಕಾರಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಚೋಸನ್‌ ಟಿವಿ ವರದಿ ತಿಳಿಸಿದೆ.