ಒಡಿಶಾ: ಮೂವತ್ತೆರಡು ವರ್ಷ ಹಿಂದಿನ ಕೊಲೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆತನ ಮನೆಯ ನೆಲಮಾಳಿಗೆಯಲ್ಲಿದ್ದ ಚೇಂಬರ್‌ನಿಂದ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಾಜ್ಪುರ ಜಿಲ್ಲೆಯ ತನ್ನ ನಿವಾಸದಲ್ಲಿ ಈತ ರಹಸ್ಯವಾಗಿ ಅಡಗಿಕೊಂಡಿದ್ದ ಎಂದು ತಿಳಿದು ಬಂದಿದೆ. ಆರೋಪಿ ರಬೀಂದ್ರ ಮಲಿಕ್ (58) ಕೌಖಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ನೌಹಾತ್ ಗ್ರಾಮದವನು. ಈತ 1994ರ ಅಕ್ಟೋಬರ್ 21ರಂದು ತನ್ನ ಸಹೋದರ ಸಂಬಂಧಿ ಪರಮಾನಂದ ಮಲಿಕ್ ಎಂಬವರನ್ನು ಹತ್ಯೆ ಮಾಡಿದ್ದ ಎಂದು ಆರೋಪಿಸಲಾಗಿದೆ.
ಆಗ 26 ವರ್ಷ ವಯಸ್ಸಿನವನಾಗಿದ್ದ ರಬೀಂದ್ರನನ್ನು ಸ್ಥಳೀಯ ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು. ತನ್ನ ಸ್ಥಳ ಹಾಗೂ ಗುರುತನ್ನು ಪದೇ ಪದೇ ಬದಲಿಸಿಕೊಳ್ಳುತ್ತಿದ್ದ ಆರೋಪಿ 32 ವರ್ಷಗಳಿಂದಲೂ ಬಂಧನದಿಂದ ತಪ್ಪಿಸಿಕೊಂಡಿದ್ದ.
ನಕಲಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಹೊಂದಿದ್ದ ಈತ ಅದಂಪುರ ಗ್ರಾಮದ ನಿವಾಸಿ ಎಂದು ಬಿಂಬಿಸಿಕೊಂಡಿದ್ದ. ಈ ಅವಧಿಯಲ್ಲಿ ಹೈದರಾಬಾದ್, ಕೇರಳ ಮತ್ತು ಇತರ ಕಡೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ಹಾಗೂ ಕುಟುಂಬದ ಜತೆ ಸಂಪರ್ಕದಲ್ಲಿದ್ದ.
“ಖಚಿತ ಸುಳಿವನ್ನು ಆಧರಿಸಿ ಆತನ ಮನೆಯ ನೆಲಮಹಡಿಯಲ್ಲಿದ್ದ ರಹಸ್ಯ ಬಂಕರ್‌ನಿಂದ ಆರೋಪಿಯನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸುವ ಸಲುವಾಗಿ ಆತ ಮನೆಗೆ ಬಂದಿದ್ದ” ಎಂದು ಕೌಖಿಯಾ ಐಐಸಿ ಸುಶಾಂತ್ ಕುಮಾರ್ ಸೇಥಿ ಹೇಳಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಗುಪ್ತವಾದ ಚೇಂಬರ್ ನಿರ್ಮಿಸಿಕೊಂಡಿದ್ದ ಎಂದು ಅವರು ವಿವರಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಅಂದರೆ 1998ರಲ್ಲಿ ಈತ ಮಂಜುಲತಾ ಎಂಬಾಕೆಯನ್ನು ವಿವಾಹವಾಗಿದ್ದ. ಆರೋಪಿಯನ್ನು ಶನಿವಾರ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಆತನ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

