ಬ್ರೂನೆ : ಪ್ರಸ್ತುತ 2 ದಿನಗಳ ಬ್ರೂನೆ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಐತಿಹಾಸಿಕ ಸುಲ್ತಾನ್ ಒಮರ್ ಅಲಿ ಸೈಫುದ್ದೀನ್ ಮಸೀದಿಗೆ ಭೇಟಿ ನೀಡಿದ್ದಾರೆ.
ಪ್ರಸ್ತುತ ಸುಲ್ತಾನ್ ಹಸ್ಸಾನಲ್ ಬೊಲ್ಕಿಯಾ ಅವರ ತಂದೆಯ ಹೆಸರಿನಲ್ಲಿ ಈ ಮಸೀದಿಯನ್ನು 1958ರಲ್ಲಿ ನಿರ್ಮಿಸಲಾಯಿತು. ಸುಲ್ತಾನ್ ಸೈಫುದ್ದೀನ್ ಅವರನ್ನು ಆಧುನಿಕ ಬ್ರೂನಿಯ ವಾಸ್ತುಶಿಲ್ಪಿ ಎಂದು ಪರಿಗಣಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರಕಾರ, ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅಲ್ಲಿಗೆ ಆಗಮಿಸುವ ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿರುವ ಭಾರತದ ಎರಡನೇ ನಾಯಕ ಪ್ರಧಾನಿ ನರೇಂದ್ರ ಮೋದಿ ಎನ್ನುವುದು ಮತ್ತೊಂದು ವಿಶೇಷ.
ಈ ಹಿಂದೆ 2016ರಲ್ಲಿ ಅಂದಿನ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಈ ಐತಿಹಾಸಿಕ ಮಸೀದಿಗೆ ಭೇಟಿ ನೀಡಿದ್ದರು. ಸುಮಾರು 15 ನಿಮಿಷಗಳ ಕಾಲ ಮಸೀದಿಯಲ್ಲಿ ತಂಗಿದ್ದ ಮೋದಿ ಆ ಮಸೀದಿಯೊಳಗೆ ಓಡಾಡಿ, ವಿಡಿಯೋ ವೀಕ್ಷಿಸಿದರು. ನಂತರ ಇಮಾಮ್ ಅವರೊಂದಿಗೆ ಸಂತಸ ಹಂಚಿಕೊಂಡರು. ಪ್ರಧಾನಿ ಮೋದಿ ಅವರು ತಮ್ಮ ಎರಡು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಸೆಪ್ಟೆಂಬರ್ 4 ಮತ್ತು 5ರಂದು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ.

