ಕೀವ್: ವಿದೇಶ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು (ಆಗಸ್ಟ್ 23) ಯುದ್ಧಪೀಡಿತ ಉಕ್ರೇನ್‌ಗೆ ಭೇಟಿ ನೀಡಿದರು. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಮೋದಿ ಉಕ್ರೇನ್‌ಗೆ ತೆರಳಿದರು.
ದ್ವಿಪಕ್ಷೀಯ ಸಹಕಾರ ಸಂಬಂಧವನ್ನು ಬಲಪಡಿಸುವ ಬಗ್ಗೆ ಮತ್ತು ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಬಗ್ಗೆ ಮೋದಿ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.
1991ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ನೀಡುತ್ತಿರುವ ಮೊದಲ ಭೇಟಿ ಇದು ಎನ್ನುವುದು ಕೂಡ ವಿಶೇಷ. “ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಬಗ್ಗೆ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲು ಮತ್ತು ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗಾಣಿಸಲು ಅಗತ್ಯವಾದ ಶಾಂತಿಯುತ ಪರಿಹಾರದ ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಅವಕಾಶವನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಮೋದಿ ದಿಲ್ಲಿಯಿಂದ ಹೊರಡುವ ಮೊದಲು ತಿಳಿಸಿದ್ದರು.
ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಭಾರತ ಇದುವರೆಗೆ ಖಂಡಿಸಿಲ್ಲ. ಅದಾಗ್ಯೂ ಮಾತುಕತೆ ಮತ್ತು ರಾಜತಾಂತ್ರಿಕಯ ಮೂಲಕ ಯುದ್ಧವನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತಲೇ ಬಂದಿದೆ. ಹೀಗಾಗಿ ಮೋದಿ ಅವರ ಭೇಟಿ ವಿಶ್ವದ ಗಮನ ಸೆಳೆದಿದೆ. ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಘರ್ಷಣೆಗಳ ಕುರಿತು, ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದು, ನಿಜಕ್ಕೂ ಆತಂಕಕಾರಿ ವಿಚಾರ ಎಂದು ಹೇಳಿದ್ದಾರೆ.
ʼʼಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಭಾರತ ದೃಢವಾಗಿ ನಂಬುತ್ತದೆ. ಯಾವುದೇ ಬಿಕ್ಕಟ್ಟಿನಲ್ಲಿ ಅಮಾಯಕರ ಜೀವಗಳನ್ನು ಕಳೆದುಕೊಳ್ಳುವುದು ಇಡೀ ಮಾನವಕುಲಕ್ಕೆ ದೊಡ್ಡ ಸವಾಲಾಗಿದೆ. ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಮರುಸ್ಥಾಪನೆಗಾಗಿ ನಾವು ಸಂಭಾಷಣೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆʼʼ ಎಂದು ಅವರು ಹೇಳಿದ್ದಾರೆ.

