ಬ್ಯಾಂಕಾಕ್: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿರುವ ಪಬ್ ಒಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 27 ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 63 ಜನರು ಗಾಯಗೊಂಡಿದ್ದಾರೆ. ಇದರಲ್ಲಿ 22 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಉತ್ತರ ಭಾಗದ ಚತುಚಕ್ ಜಿಲ್ಲೆಯ ʻರೋಂಗ್ ಬೀರ್ ನಾ ಲಾಟ್ ಫ್ರಾವೊʼ ಪಬ್‌ನಲ್ಲಿ ಮಧ್ಯರಾತ್ರಿಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಭಯಭೀತರಾದ ಗ್ರಾಹಕರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು, ದಟ್ಟವಾದ ಕಪ್ಪು ಹೊಗೆ ಏಳುವುದು ದಾಖಲಾಗಿದೆ.
ಥೈಲ್ಯಾಂಡ್ ಪ್ರಧಾನಿ ಅನುತಿನ್ ಚಾರ್ನ್‌ವಿರಕುಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಪ್ಪತ್ತೇಳು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಜನರು ಕಟ್ಟಡದಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದಂತೆ ದಟ್ಟವಾದ ಕಪ್ಪು ಹೊಗೆ ಆವರಿಸಿರುವುದು ಕಾಣಬಹುದು. ಅಲ್ಲದೇ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಅಲ್ಲಿಂದ ಪಿಠೋಪಕರಣಗಳು ಎಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿವೆ.

