ಲೂಸಿಯಾನಾ: ಅಮೆರಿಕದ ಲೂಸಿಯಾನಾದ ಶ್ರೆವ್ ಪೋರ್ಟ್ ನಲ್ಲಿ ಬೆಳ್ಳಂಬೆಳಿಗ್ಗೆ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ ಎಂಟು ಮಕ್ಕಳು ಮೃತಪಟ್ಟಿದ್ದಾರೆ. ಮೃತಪಟ್ಟ ಎಲ್ಲರೂ 14 ವರ್ಷಕ್ಕಿಂತ ಕೆಳ ವಯಸ್ಸಿನವರು ಎಂದು ತಿಳಿದುಬಂದಿದೆ.
ಪ್ರಕರಣದ ಬಗ್ಗೆ ತನಿಖೆ ಇನ್ನೂ ಪ್ರಗತಿಯಲ್ಲಿದ್ದರೂ, ಇದನ್ನು ಕುಟುಂಬ ಕಿರುಕುಳದ ಪ್ರಕರಣ ಎಂದು ಪರಿಗಣಿಸಲಾಗಿದೆ. ಆದರೆ ಈ ಗುಂಡಿನ ದಾಳಿಗೆ ಕಾರಣ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಶಂಕಿತ ದಾಳಿಕೋರನನ್ನು ಹತ್ಯೆ ಮಾಡಲಾಗಿದೆ. ಆದಾಗ್ಯೂ ಆತನ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ. ದಾಳಿಕೋರ ವಯಸ್ಕ ಪುರುಷ ಎನ್ನುವುದನ್ನಷ್ಟೇ ಪ್ರಕಟಿಸಲಾಗಿದೆ.
“ದಾಳಿಯಲ್ಲಿ ಕನಿಷ್ಠ ಎಂಟು ಮಕ್ಕಳು ಮೃತಪಟ್ಟಿದ್ದಾರೆ; ಎಲ್ಲರೂ 14ಕ್ಕಿಂತ ಕೆಳವಯಸ್ಸಿನವರು ಮತ್ತು ದಾಳಿಕೋರನ ಸಂಬಂಧಿಕರೂ ಇದರಲ್ಲಿ ಸೇರಿದ್ದಾರೆ” ಎಂದು ಶ್ರೆವ್ ಪೋರ್ಟ್ ಪೊಲೀಸ್ ಇಲಾಖೆ ವಕ್ತಾರ ಕ್ರಿಸ್ ಬೋರ್ಡೆಲಾನ್ ಹೇಳಿದ್ದಾನೆ. ಈ ಹಿಂದೆ ಎಂದೂ ನೋಡಿರದಂಥ ಭೀಕರ ಕೃತ್ಯ ಇದಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಎರಡು ಮನೆಗಳಲ್ಲಿ ದಾಳಿ ನಡೆದಿದ್ದು, ಒಂದು ಮನೆಯಲ್ಲಿ ಗುಂಡಿನ ದಾಳಿ ಆರಂಭಿಸಿದ ದಾಳಿಕೋರ ಮತ್ತೊಂದು ಮನೆಗೆ ತೆರಳಿ ಈ ಹೇಯ ಕೃತ್ಯ ಮುಂದುವರಿಸಿದ ಎಂದು ಪೊಲೀಸರು ವಿವರಿಸಿದ್ದಾರೆ.

