ಟೆಹ್ರಾನ್:‌ ಇಸ್ರೇಲ್‌, ಅಮೆರಿಕ ಹಾಗೂ ಇರಾನ್‌ ನಡುವಿನ ಯುದ್ಧ ಇಂದು 10ನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್‌ ನ ಸೇನಾಪಡೆ ಇರಾನ್‌ ನ ಪ್ರಮುಖ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ವೈಮಾನಿಕ ಸೇರಿದಂತೆ ಪ್ರಬಲ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್‌ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಮಿಸೈಲ್ಸ್‌ ಮತ್ತು ಡ್ರೋನ್‌ ದಾಳಿ ನಡೆಸಿತ್ತು.

ಅಮೆರಿಕ, ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ನಡೆಸುತ್ತಿರುವ ದಾಳಿಯಲ್ಲಿ ಈವರೆಗೆ 1,500ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಆದರೆ ಮಾಧ್ಯಮಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ ನಲ್ಲಿ ಸಾವನ್ನಪ್ಪಿರುವವರ ಕುರಿತ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ದಾಳಿಯ ಪರಿಣಾಮ ಇರಾನ್‌, ಲೆಬನಾನ್‌ ಮತ್ತು ಇರಾಕ್‌ ನಿಂದ 1,00,000 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ. ಲೆಬನಾನ್‌ ರಾಜಧಾನಿ ಬೈರುತ್‌ ನಗರವನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್‌ ಸೇನಾಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಐಆರ್‌ ಜಿಸಿಯ ಐವರು ಹಿರಿಯ ಕಮಾಂಡರ್‌ ಗಳು ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ. ಮತ್ತೊಂದೆಡೆ ಉತ್ತರ ಸೈಪ್ರಸ್‌ ಗೆ ಎಫ್‌ 16 ಯುದ್ಧ ವಿಮಾನ ಮತ್ತು ವಾಯು ರಕ್ಷಣಾ ಸಿಸ್ಟಮ್‌ ಅನ್ನು ಕಳುಹಿಸಿರುವುದಾಗಿ ಟರ್ಕಿ ರಕ್ಷಣಾ ಸಚಿವಾಲಯ ತಿಳಿಸಿದೆ.