ಟೆಲ್‌ ಅವಿವ್:‌ ಇಸ್ರೇಲ್‌ ಗುರುವಾರ (ಅ.03) ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಜಾದ ಹಮಾಸ್‌ ಮುಖ್ಯಸ್ಥ ರಾವ್ಹಿ ಮುಶ್ತಾನಾ ಸೇರಿದಂತೆ ಮೂವರು ಪ್ಯಾಲೆಸ್ತೇನ್‌ ನ ಹಮಾಸ್‌ ಮುಖಂಡರು ಸಾವನ್ನಪ್ಪಿರುವುದಾಗಿ ಇಸ್ರೇಲ್‌ ರಕ್ಷಣಾ ಪಡೆ  ಹೇಳಿದೆ.

ಕಾರ್ಯಾಚರಣೆಯ ಮಾಹಿತಿಯನ್ನು ಹಂಚಿಕೊಂಡಿರುವ ಇಸ್ರೇಲ್‌ ರಕ್ಷಣಾ ಪಡೆ, ಉತ್ತರ ಗಾಜಾದಲ್ಲಿ ನಡೆಸಿದ ಅಂಡರ್‌ ಗ್ರೌಂಡ್‌ ಕಾಂಪೌಂಡ್‌ ಮೇಲಿನ ದಾಳಿಯಲ್ಲಿ ರಾವ್ಹಿ ಮುಶ್ತಾನಾ ಹಾಗೂ ಇಬ್ಬರು ಹಮಾಸ್‌ ಕಮಾಂಡರ್‌ ಗಳು ಸಾವನ್ನಪ್ಪಿದ್ದು, ಅವರನ್ನು ಸಮೇಹ್‌ ಸಿರಾಜ್‌ ಹಾಗೂ ಸಮೇಹ್‌ ಔದೇಹ್‌ ಎಂದು ಗುರುತಿಸಲಾಗಿದೆ.

ಇಸ್ರೇಲ್‌ ರಕ್ಷಣಾ ಪಡೆಯ ಹೇಳಿಕೆ ಬಗ್ಗೆ ಹಮಾಸ್‌ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂಡರ್‌ ಗ್ರೌಂಡ್‌ ಕಂಪೌಂಡ್‌ ನೊಳಗಿನ ಕಂಟ್ರೋಲ್‌ ಸೆಂಟರ್‌ ಗೆ ಮೂವರು ಕಮಾಂಡರ್‌ ಗಳನ್ನು ಭಾರೀ ಭದ್ರತೆಯೊಂದಿಗೆ ಇರಿಸಲಾಗಿದ್ದು, ನಮ್ಮ ಮಿಸೈಲ್‌ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವುದಾಗಿ ತಿಳಿಸಿದೆ.