ಟೆಹರಾನ್: ಈಶಾನ್ಯ ಇರಾನ್‌ನ ಮಶಾದ್ ಪಟ್ಟಣದಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆ ಶಿಯಾ ಧಾರ್ಮಿಕ ಸಂಪ್ರದಾಯದಂತೆ ನೆರವೇರಿತು. ಅಂತಿಮ ಯಾತ್ರೆಯಲ್ಲಿ ಸೇರಿದ್ದ ಸಾಗರೋಪಾದಿಯ ಅಭಿಮಾನಿಗಳ ತಮ್ಮ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

‘ಇಸ್ಲಾಮಿಕ್ ಕ್ರಾಂತಿಯ ಹುತಾತ್ಮ ನಾಯಕನ ಮೃತದೇಹವನ್ನು ಇಮಾಮ್ ರಜಾ ಅವರ ಸ್ಮಾರಕ ಸಭಾಂಗಣದಲ್ಲಿ ಹೂಳಲಾಯಿತು’ಎಂದು ಇರಾನ್‌ನ ಸುದ್ದಿ ಸಂಸ್ಥೆ ಐಆರ್‌ಐಬಿ ವರದಿ ಮಾಡಿದೆ.

ಫೆಬ್ರುವರಿ 28ರಂದು ಅಮೆರಿಕ–ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಆಯತೊಲ್ಲಾ ಖಮೇನಿ ಮೃತಪಟ್ಟಿದ್ದರು. ಅದಾದ ಬಳಿಕ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಭೀಕರ ಯುದ್ಧ ಆರಂಭವಾಗಿತ್ತು. ದಾಳಿ–ಪ್ರತಿದಾಳಿ ನಡೆದಿದ್ದವು. ಅಮೆರಿಕ ದಾಳಿಯ ಆತಂಕದ ಹಿನ್ನೆಲೆಯಲ್ಲಿ 4 ತಿಂಗಳಿನಿಂದ ಅಂತ್ಯ ಸಂಸ್ಕಾರ ನಡೆಸಿರಲಿಲ್ಲ. ಮಧ್ಯಂತರ ಯುದ್ಧ ವಿರಾಮ ಒಪ್ಪಂದದ ಬಳಿಕ ಜುಲೈ 10 ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಇರಾನ್ ಧ್ವಜದಿಂದ ಆವೃತವಾದ ಖಮೇನಿ ಅವರ ಶವಪೆಟ್ಟಿಗೆಯನ್ನು ಈಶಾನ್ಯ ಇರಾನ್‌ನ ಅವರ ತವರು ನಗರವಾದ ಮಶಾದ್‌ನಲ್ಲಿರುವ ಇಮಾಮ್ ರೆಜಾ ಪವಿತ್ರ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಜುಲೈ 4ರಿಂದಲೇ 6 ದಿನಗಳ ವಿಧಿ ವಿಧಾನ ಆರಂಭವಾಗಿತ್ತು.

ಅಮೆರಿಕ ಜೊತೆ ಮಾತುಕತೆ ನಡೆಸುತ್ತಿರುವ ಸಂಸತ್ತಿನ ಸ್ಪೀಕರ್ ಮತ್ತು ಮುಖ್ಯ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್, ಮುಖ್ಯ ನ್ಯಾಯಮೂರ್ತಿ ಘೋಲಮ್‌ಹೊಸೇನ್ ಮೊಹ್ಸೆನಿ ಎಜೈ ಮತ್ತು ಖಮೇನಿಯವರ ಹಿರಿಯ ಮಗ ಮುಸ್ತಫಾ ಖಮೇನಿ ಅಂತ್ಯಕ್ರಿಯೆ ವೇಳೆ ಉಪಸ್ಥಿತರಿದ್ದರು. ಹಿರಿಯ ನಾಯಕರು ಸಹ ಖಮೇನಿಯವರ ಶವಪೆಟ್ಟಿಗೆ ಮುಂದೆ ರೋಧಿಸುತ್ತಿರುವ ದೃಶ್ಯ ಕಂಡುಬಂದಿದೆ.

ಅಂತ್ಯ ಸಂಸ್ಕಾರಕ್ಕೆ ಎರಡು ದಿನ ಬಾಕಿ ಇರುವಂತೆ ಜುಲೈ 8ರಂದು ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದಿತ್ತು. ಹೊರ್ಮುಜ್ ಜಲಸಂಧಿಯ ಹಡಗುಗಳ ಮೇಲೆ ಇರಾನ್ ದಾಳಿಗೆ ಪ್ರತಿಯಾಗಿ ಅಮೆರಿಕ ಸುಮಾರು 90 ಗುರಿಗಳಲ್ಲಿ ದಾಳಿ ಮಾಡಿದೆ. ಅಂತ್ಯಸಂಸ್ಕಾರ ನಡೆಯುತ್ತಿದ್ದ ಮಸಾದ್ ಮತ್ತು ಟೆಹರಾನ್ ನಡುವಿನ ರೈಲ್ವೆ ಮಾರ್ಗವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, 17 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.