ಟೆಹ್ರಾನ್:‌ ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ನಡೆಸುತ್ತಿರುವ ವೈಮಾನಿಕ ದಾಳಿಯಲ್ಲಿ, ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ಮಾಧ್ಯಮ ವರದಿ ಮಾಡಿದೆ. ಈ ಮೂಲಕ ಖಮೇನಿ ಹತ್ಯೆ ದೃಢಪಟ್ಟಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಟೆಹ್ರಾನ್ ಮೇಲೆ ನಡೆದ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ಹಲವಾರು ರಾಜ್ಯ ಮಾಧ್ಯಮಗಳು ತಿಳಿಸಿವೆ. ರಾಷ್ಟ್ರದ ಮೇಲೆ ಅಮೆರಿಕ-ಇಸ್ರೇಲಿ ಜಂಟಿ ದಾಳಿಯ ನಂತರ ಖಮೇನಿ ಕೊಲ್ಲಲ್ಪಟ್ಟರು ಎಂದು ಅಮೆರಿಕ ಮತ್ತು ಇಸ್ರೇಲ್ ಹೇಳಿದ ನಂತರ ಮಾಧ್ಯಮಗಳು ಅಧಿಕೃತವಾಗಿ ತಿಳಿಸಿವೆ.

ಇರಾನ್‌ನ ರಾಜ್ಯ ಪ್ರಸಾರ ಐಆರ್‌ಐಬಿ ಭಾನುವಾರ ಬೆಳಗ್ಗೆ “ಇರಾನ್‌ನ ಸರ್ವೋಚ್ಚ ನಾಯಕ ಹುತಾತ್ಮರಾಗಿದ್ದಾರೆ” ಎಂದು ವರದಿ ಮಾಡಿದೆ. ಖಮೇನಿ ಮಾತ್ರವಲ್ಲದೆ ಇಸ್ರೇಲ್-ಯುಎಸ್‌ ನಡೆಸಿದ ಜಂಟಿ ದಾಳಿಗೆ ಇರಾನ್‌ನ ರಕ್ಷಣಾ ಸಚಿವ ಅಮೀರ್‌ ನಾಸಿರ್ಜಾದೆ ಅವರು ಕೂಡಾ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಇಸ್ರೇಲ್ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಕ್ರಾಂತಿಕಾರಿ ಗಾರ್ಡ್ ಕಮಾಂಡರ್ ಮೊಹಮ್ಮದ್ ಪಕ್ಪೌರ್ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ತಿಳಿದಿರುವ ಎರಡು ಮೂಲಗಳು ಮತ್ತು ಒಂದು ಪ್ರಾದೇಶಿಕ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ಇನ್ನು ಟ್ರಂಪ್ ಅಲ್ ಖಮೇನಿಯವರ ಮರಣವನ್ನು ದೃಢಪಡಿಸುತ್ತಿದ್ದಂತೆ, ಇರಾನ್ ಸುಪ್ರೀಮೋ ಅವರ ಖಾತೆಯಿಂದ ಮಾಡಲಾದ ನಿಗೂಢ ಪೋಸ್ಟ್‌ನಲ್ಲಿ, ‘ಅವರಿಗೆ ಶಾಂತಿ ಸಿಗಲಿ’ ಎಂದು ಬರೆದಿರುವುದು ಕಾಣಿಸಿಕೊಂಡಿದೆ.