ಕುವೈತ್: ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವಿನ ಪ್ರಾದೇಶಿಕ ಸಂಘರ್ಷ ಇದೀಗ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದ್ದು, ಗಲ್ಫ್ ರಾಷ್ಟ್ರವಾದ ಕುವೈತ್ ಮೇಲೆ ಇರಾನ್ ನಡೆಸಿರುವ ಭೀಕರ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ.
ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಿವಿಧ ದೇಶಗಳ ರಾಜತಾಂತ್ರಿಕ ಕಚೇರಿಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬುಧವಾರ ಖಚಿತಪಡಿಸಿದೆ.
ಪ್ರಸ್ತುತ ದಾಳಿಯಲ್ಲಿ ಮೃತಪಟ್ಟ ಭಾರತೀಯ ಪ್ರಜೆಯ ಗುರುತನ್ನು ರಾಯಭಾರ ಕಚೇರಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಭಾರತೀಯ ಮಿಷನ್, ಮೃತರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲಾ ಕಾನೂನಾತ್ಮಕ ನೆರವು ನೀಡಲು ಕುವೈತ್ ಅಧಿಕಾರಿಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ಒಕ್ಕೂಟದ ನಡುವೆ ಹೆಚ್ಚಾಗುತ್ತಿರುವ ಈ ಜಾಗತಿಕ ಸಂಘರ್ಷದಲ್ಲಿ ಭಾರತೀಯರೊಬ್ಬರು ಬಲಿಯಾಗಿರುವ ಮೊದಲ ಘಟನೆ ಇದಾಗಿದೆ ಎಂದು ಕುವೈತ್ ಸರ್ಕಾರ ಖಚಿತಪಡಿಸಿದೆ.

