ವಾಷಿಂಗ್ಟನ್: ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಹಲವು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (ಐಆರ್‌ಜಿಸಿ) ಹಾರಿಸಿದ ಎಲ್ಲಾ ಕ್ಷಿಪಣಿಗಳನ್ನು ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ತಡೆದಿದೆ ಎಂದು ಸೆಂಟ್ರಲ್ ಕಮಾಂಡ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ರಾಜತಾಂತ್ರಿಕ ಪರಿಹಾರಕ್ಕಾಗಿ ಇರಾನ್ ಮನವಿ ಮೇರೆಗೆ ಸೇನಾ ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದ್ದರು. ಇದರ ಬೆನ್ನಲ್ಲೇ ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಹಲವು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ವರದಿಯಾಗಿದೆ.
ಜೋರ್ಡಾನ್ ವಿರುದ್ಧ ಇರಾನ್ ನಡೆಸಿದ ದಾಳಿಯನ್ನು ಕುವೈತ್, ಕತಾರ್ ಸೇರಿದಂತೆ ಹಲವು ಗಲ್ಫ್ ದೇಶಗಳು ತೀವ್ರವಾಗಿ ಖಂಡಿಸಿವೆ. ಈ ದಾಳಿಯು ಜೋರ್ಡಾನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕುವೈತ್ ವಿದೇಶಾಂಗ ಸಚಿವಾಲಯವು ಆಕ್ರೋಶ ವ್ಯಕ್ತಪಡಿಸಿದೆ.
ಇತ್ತ, ಕತಾರ್ ಕೂಡ ಜೋರ್ಡಾನ್ ಜೊತೆಗಿನ ಒಗ್ಗಟ್ಟನ್ನು ಪುನರುಚ್ಚರಿಸಿದೆ. ದೇಶವನ್ನು ರಕ್ಷಿಸಲು ಜೋರ್ಡಾನ್ ನಾಯಕತ್ವ ಕೈಗೊಳ್ಳುವ ಎಲ್ಲಾ ಭದ್ರತಾ ಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಕಟಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಇರಾನ್ ವಿಷಯದ ಕುರಿತು ಉನ್ನತ ಮಟ್ಟದ ಮಾತುಕತೆ ನಡೆಸಿದ ಕೆಲವೇ ಗಂಟೆಗಳ ನಂತರ ಈ ದಾಳಿಗಳು ನಡೆದಿವೆ.

