ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಭಾರತೀಯ ಧ್ವಜದ ಎರಡು ತೈಲ ನೌಕೆಗಳ ಮೇಲೆ ಇರಾನ್‌ನ ನೌಕಾಪಡೆ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.

ಈ ಘಟನೆಯ ಸಂದರ್ಭದಲ್ಲಿ ಹಡಗಿನಲ್ಲಿದ್ದ ಸಿಬ್ಬಂದಿ ಮತ್ತು ಇರಾನ್ ನೌಕಾಪಡೆಯ ನಡುವೆ ನಡೆದ ಸಂಭಾಷಣೆಯ ಆಡಿಯೋ ಈಗ ಹೊರಬಿದ್ದಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ. ದಾಳಿಗೊಳಗಾದ ಹಡಗುಗಳಲ್ಲಿ ‘ಸನ್ಮಾರ್ ಹೆರಾಲ್ಡ್’ ಎಂಬ ಕಚ್ಚಾ ತೈಲ ಸಾಗಣೆ ಹಡಗು ಕೂಡ ಒಂದಾಗಿತ್ತು. ಬಿಡುಗಡೆಯಾಗಿರುವ ಆಡಿಯೋದಲ್ಲಿ ಹಡಗಿನ ಸಿಬ್ಬಂದಿಯೊಬ್ಬರು ಅತ್ಯಂತ ಆತಂಕದಿಂದ ಮಾತನಾಡುತ್ತಿರುವುದು ಕೇಳಿಸುತ್ತದೆ.

ನೀವೇ ನಮಗೆ ಮುಂದೆ ಹೋಗಲು ಅನುಮತಿ ನೀಡಿದ್ದೀರಿ. ನಿಮ್ಮ ಪಟ್ಟಿಯಲ್ಲಿ ನಮ್ಮ ಹೆಸರು ಎರಡನೇ ಸ್ಥಾನದಲ್ಲಿದೆ. ಹೀಗಿದ್ದರೂ ಈಗ ನಮ್ಮ ಮೇಲೆ ಗುಂಡು ಹಾರಿಸುತ್ತಿದ್ದೀರಿ. ದಯವಿಟ್ಟು ನಾವು ವಾಪಸ್ ಹೋಗಲು ಅವಕಾಶ ನೀಡಿ ಎಂದು ಅವರು ಇರಾನ್ ನೌಕಾಪಡೆಗೆ ಮನವಿ ಮಾಡುತ್ತಿರುವುದು ದಾಖಲಾಗಿದೆ. ಈ ಸಂಭಾಷಣೆಯು ಸಮುದ್ರದ ಮಧ್ಯೆ ಉಂಟಾದ ಗೊಂದಲ ಮತ್ತು ಭೀತಿಯನ್ನು ಅನಾವರಣಗೊಳಿಸಿದೆ.

ವರದಿಗಳ ಪ್ರಕಾರ, ಈ ಘಟನೆಯಲ್ಲಿ ಭಾರತದ ‘ಸನ್ಮಾರ್ ಹೆರಾಲ್ಡ್’ ಮತ್ತು ‘ಜಗ್ ಅರ್ನವ್’ ಎಂಬ ಎರಡು ಹಡಗುಗಳು ಗುರಿಯಾಗಿದ್ದವು. ಅದೃಷ್ಟವಶಾತ್, ಈ ದಾಳಿಯಲ್ಲಿ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಮತ್ತು ಹಡಗುಗಳಿಗೆ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಏರುಪೇರಾಗಿದೆ. ಇರಾನ್ ಮೊದಲು ಈ ಮಾರ್ಗವನ್ನು ತೆರೆಯುವುದಾಗಿ ಹೇಳಿತ್ತಾದರೂ, ನಂತರ ತನ್ನ ನಿರ್ಧಾರವನ್ನು ಬದಲಿಸಿ ಹಡಗುಗಳ ಮೇಲೆ ಕಣ್ಗಾವಲು ಹೆಚ್ಚಿಸಿದೆ.

ಈ ಘಟನೆಯನ್ನು ಭಾರತ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ದೆಹಲಿಯಲ್ಲಿರುವ ಇರಾನ್ ರಾಯಭಾರಿಯನ್ನು ಕರೆಸಿಕೊಂಡ ವಿದೇಶಾಂಗ ಸಚಿವಾಲಯವು ತನ್ನ ತೀವ್ರ ಅಸಮಾಧಾನ ಮತ್ತು ಕಳವಳವನ್ನು ವ್ಯಕ್ತಪಡಿಸಿದೆ. ಸಮುದ್ರ ಮಾರ್ಗದಲ್ಲಿ ಸಂಚರಿಸುವ ವ್ಯಾಪಾರಿ ಹಡಗುಗಳ ಮತ್ತು ನಾವಿಕರ ಸುರಕ್ಷತೆ ನಮಗೆ ಮುಖ್ಯ ಎಂದು ಭಾರತ ಸ್ಪಷ್ಟಪಡಿಸಿದೆ.

ಈ ಹಿಂದೆಯೂ ಭಾರತದ ಹಡಗುಗಳಿಗೆ ಇರಾನ್ ಸುರಕ್ಷಿತ ಹಾದಿ ಮಾಡಿಕೊಟ್ಟಿರುವುದನ್ನು ನೆನಪಿಸಿದ ಭಾರತದ ವಿದೇಶಾಂಗ ಕಾರ್ಯದರ್ಶಿಗಳು, ಇನ್ನು ಮುಂದೆಯೂ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ. ಸದ್ಯಕ್ಕೆ ಹಾರ್ಮುಜ್ ಮಾರ್ಗದಲ್ಲಿ ಸಂಚರಿಸುವ ಹಡಗುಗಳಿಗೆ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ.

— Insider Paper (@TheInsiderPaper) April 18, 2026