ಲೇಹ್: ಲಡಾಖ್‌ನ ಲೇಹ್ ಜಿಲ್ಲೆಯ ಗಡಿ ಭಾಗದ ಪರ್ವತ ಪ್ರದೇಶವಾದ ಟ್ಯಾಂಗ್ಸ್ಟೆ ಬಳಿ ಭಾರತೀಯ ಸೇನೆಗೆ ಸೇರಿದ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಪತನಗೊಂಡಿದೆ.

ಹೆಲಿಕಾಪ್ಟರ್ ಸಂಪೂರ್ಣವಾಗಿ ಜಖಂಗೊಂಡಿದ್ದರೂ, ಅದರಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಪವಾಡ ಸದೃಶ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೇ 20 ರಂದು ವಾಡಿಕೆಯ ಹಾರಾಟದಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಲಡಾಖ್‌ನ ಕಠಿಣ ಹವಾಮಾನ ಮತ್ತು ಕಡಿದಾದ ಪರ್ವತಗಳ ಮಧ್ಯೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆಗಳು ಮತ್ತು ವೈದ್ಯಕೀಯ ತಂಡಗಳು, ಹೆಲಿಕಾಪ್ಟರ್‌ನಲ್ಲಿದ್ದ ಅಧಿಕಾರಿಗಳನ್ನು ಸುರಕ್ಷಿತವಾಗಿ ಹೊರತೆಗೆದು ಲೇಹ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿವೆ. ಸದ್ಯ ಅಧಿಕಾರಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಸೇನೆ ತಿಳಿಸಿದೆ.

ಸೇನೆಯ ‘ಚೀತಾ’ ಹೆಸರಿನ ಸಿಂಗಲ್-ಎಂಜಿನ್ ಹೆಲಿಕಾಪ್ಟರ್‌ನಲ್ಲಿ ಒಬ್ಬರು ಲೆಫ್ಟಿನೆಂಟ್ ಕರ್ನಲ್ ಮತ್ತು ಇಬ್ಬರು ಮೇಜರ್ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್ ಅನ್ನು ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬರು ಮೇಜರ್ ಚಲಾಯಿಸುತ್ತಿದ್ದರು. ಇವರೊಂದಿಗೆ 3ನೇ ಪದಾತಿ ದಳದ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿರುವ ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು ಪ್ರಯಾಣಿಕರಾಗಿ ಅದೇ ವಿಮಾನದಲ್ಲಿದ್ದರು. ಈ ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಭಾರತೀಯ ಸೇನೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

View this post on Instagram

A post shared by News Karnataka (@newskarnataka)