ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಇಶಾಕ್ ದಾರ್ ಶನಿವಾರ ಭಾರತ ದಾಳಿ ಮಾಡದಿದ್ದರೆ, ನಾವು ಕೂಡಾ ದಾಳಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ಪರೋಕ್ಷವಾಗಿ ಯುದ್ಧ ನಡೆಸದಂತೆ ಭಾರತಕ್ಕೆ ಮನವಿ ಮಾಡಿದ್ಧಾರೆ.
ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಾತನಾಡಿರುವ ಅವರು, ಭಾರತ ಇನ್ನಾದರೂ ದಾಳಿ ಮಾಡುವುದನ್ನು ನಿಲ್ಲಿಸಿದರೆ ಇಸ್ಲಾಮಾಬಾದ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಬಯಸುತ್ತದೆ. ಆದರೆ ನಾವು ಮಿಲಿಟರಿ ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ ಮತ್ತು ಕನಿಷ್ಠ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ನಾಗರಿಕ ಮಿಲಿಟರಿ ನಾಯಕತ್ವ ತೆಗೆದುಕೊಂಡ ಕ್ರಮವು ಪ್ರಮಾಣಾನುಗುಣವಾಗಿದೆ. ಇನ್ನೂ ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು, ಮತ್ತು ನಾವು ಅದಕ್ಕೆ ಸಿದ್ಧರಿದ್ದೇವೆ. ಆದರೆ ಇದು ಇದೀಗ ತೆಗೆದುಕೊಳ್ಳುತ್ತಿರುವ ಕನಿಷ್ಠ ಕ್ರಮವಾಗಿದೆ. ಇದನ್ನು ಸ್ವಲ್ಪ ಸಮಯದವರೆಗೆ ಇದನ್ನೇ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಕಳೆದ ಮೂರು ದಿನಗಳಿಂದ ಭಾರತ ನಡೆಸುತ್ತಿರುವ ದಾಳಿ ಮತ್ತು ಭಾರತದ ಮಿಲಿಟರಿ ಕ್ರಮಗಳಿಗೆ ಪ್ರತೀಕಾರ ತೀರಿಸಿಕೊಳ್ಳುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ನಾವು ಭಾರತಕ್ಕೆ ಪಾಕಿಸ್ತಾನದ ಪ್ರಾಬಲ್ಯವನ್ನು ಪಡೆಯಲು ಬಿಡುವುದಿಲ್ಲ ಎಂದರು.

