ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದ ಹಲವು ದೇಶಗಳಲ್ಲಿ ವ್ಯಾಪಕ ಬರದಿಂದಾಗಿ ತಿನ್ನಲು ಅನ್ನ ಆಹಾರವಿಲ್ಲದೇ ಜನ ಹಸಿವೆಯಿಂದ ಸಾಯುವ ಸ್ಥಿತಿ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಹಸಿವು ನೀಗಿಸುವ ಸಲುವಾಗಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದ ದೇಶಗಳ ಸರ್ಕಾರವೂ ಆನೆ, ಘೇಂಡಾಮೃಗ ಸೇರಿದಂತೆ ಕಾಡುಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ಮಾಂಸದಿಂದ ಜನರ ಹೊಟ್ಟೆ ತುಂಬಿಸಲು ಮುಂದಾಗಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಕಳೆದ 100 ವರ್ಷಗಳಲ್ಲೇ ಕಂಡು ಕೇಳರಿಯದ ಬರಗಾಲಕ್ಕೆ ಆಫ್ರಿಕಾದ ನಮೀಬಿಯಾ ತುತ್ತಾಗಿದೆ. ಇದರಿಂದ ಬೆಳೆ ಬೆಳೆಯಲಾಗದೇ ತಿನ್ನಲು ಆಹಾರವಿಲ್ಲದೇ ಜನ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಜನರ ಜೀವ ಉಳಿಸುವುದಕ್ಕಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಬರಗಾಲಕ್ಕೆ ತುತ್ತಾಗಿರುವ ದಕ್ಷಿಣ ಆಫ್ರಿಕಾದ ನಮೀಬಿಯಾ ದೇಶವೂ ಆನೆಗಳು, ಘೇಂಡಾಮೃಗಗಳು ಸೇರಿದಂತೆ ಅಂದಾಜು 100 ಪ್ರಾಣಿಗಳನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದೆ. ನಮೀಬಿಯಾದ ಪರಿಸರ ಸಚಿವಾಲಯ ಹಾಗೂ ಅರಣ್ಯ ಹಾಗೂ ಪ್ರವಾಸೋದ್ಯಮ ಸಚಿವಾಲಯವೂ ಈ ವಾರದ ಆರಂಭದಲ್ಲೇ ಈ ವಿಚಾರದ ಬಗ್ಗೆ ಘೋಷಣೆ ಮಾಡಿದೆ. ನೀರು ಆಹಾರವಿಲ್ಲದೇ ಕಂಗಾಲಾಗಿರುವ ಜನರ ಹೊಟ್ಟೆ ತುಂಬಿಸಲು ಒಟ್ಟು 723 ಪ್ರಾಣಿಗಳ ಹತ್ಯೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಪಟ್ಟಿಯಲ್ಲಿ 30 ಘೇಂಡಾಮೃಗಗಳು, 60 ಎಮ್ಮೆಗಳು, 50 ಜಿಂಕೆಗಳು 100 ನೀಲಿ ಹೇಸರಗತ್ತೆ300 ಜೀಬ್ರಾಗಳು ಹಾಗೂ 83 ಆನೆಗಳು ಹಾಗೂ 100 ಕಾಡುಕೋಣಗಳುಸೇರಿವೆ