ಬ್ಯಾಂಗುಯಿ : ಭೀಕರ ಗಣಿ ದುರಂತ ಸಂಭವಿಸಿದ ಘಟನೆ ಮಧ್ಯ ಆಫ್ರಿಕಾ ಗಣರಾಜ್ಯದ ಪಶ್ಚಿಮ ಭಾಗದಲ್ಲಿ ನಡೆದಿದೆ. ಕನಿಷ್ಠ 30 ಚಿನ್ನದ ಗಣಿ ಕಾರ್ಮಿಕರು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ಮುಂದುವರಿದಿದೆ.

ನಾನಾ-ಮಂಬೆರೆ ಪ್ರಿಫೆಕ್ಚರ್‌ನ ಅಬ್ಬಾ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಈ ಅವಘಡ ನಡೆದಿದೆ. ಯಾವುದೇ ಆಧುನಿಕ ಉಪಕರಣಗಳಿಲ್ಲದೆ, ಅತ್ಯಂತ ಅಪಾಯಕಾರಿ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ನಡೆಸಲಾಗುತ್ತಿದ್ದ ಸಣ್ಣ ಪ್ರಮಾಣದ ಚಿನ್ನದ ಗಣಿಯ ಒಂದು ಭಾಗ ಏಕಾಏಕಿ ಕುಸಿದು ಬಿದ್ದಿದೆ.

ಅವಘಡ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಇದುವರೆಗೆ 30 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡ ಹಲವು ಕಾರ್ಮಿಕರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

ಬದುಕುಳಿದ ಕಾರ್ಮಿಕ ಫ್ಲೋರಿಯನ್ ಗಾಗುಯೆಂಡೆ ಅವರ ಪ್ರಕಾರ, “ಗಣಿಯಾಳದಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದೆ. ಆದರೆ ಸಮಯ ಕಳೆಯುತ್ತಿದ್ದಂತೆ ಅವರನ್ನು ಜೀವಂತವಾಗಿ ಹೊರತೆಗೆಯುವ ನಿರೀಕ್ಷೆ ಕ್ಷೀಣಿಸುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಘಟನೆಯ ತೀವ್ರತೆಯನ್ನು ಗಮನಿಸಿ ಸ್ಥಳೀಯ ಉಪಮೇಯರ್ ಸೌಲೆಮೇನ್ ಬಿ ಅವರು ಗಣಿಯಿಂದ ಜನರನ್ನು ರಕ್ಷಿಸಲು ಹೆಚ್ಚಿನ ತಾಂತ್ರಿಕ ನೆರವು ಮತ್ತು ಉಪಕರಣಗಳ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

ಸರ್ಕಾರದ ವಕ್ತಾರ ಎವರಿಸ್ಟ್ ನ್ಗಾಮಾನಾ ಅವರು ಘಟನೆಗೆ ತೀವ್ರ ಕಂಬನಿ ಮಿಡಿದಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.