ಕಾಂಗೋ: ಆಫ್ರಿಕಾ ಖಂಡದ ಕಾಂಗೋ ದೇಶದಲ್ಲಿ ಎಬೋಲಾ ವೈರಸ್ ಸೋಂಕು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾವಿನ ಸಂಖ್ಯೆ 2,000 ಗಡಿ ದಾಟಿದೆ. ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಹರಡುತ್ತಿರುವ ಎಬೋಲಾ ಸೋಂಕು ಇದಾಗಿದ್ದು, ಸಾರ್ವಜನಿಕ ಆರೋಗ್ಯ ರಕ್ಷಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಾಂಗೋ ಸರ್ಕಾರದ ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಇದುವರೆಗೆ 4,381 ಎಬೋಲಾ ಪ್ರಕರಣಗಳು ದೃಢಪಟ್ಟಿದ್ದು, 2,011 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಎಬೋಲಾ ಪತ್ತೆಯಾದ ಕೇವಲ 9 ವಾರಗಳಲ್ಲಿ 1,000 ಸಾವುಗಳು ಸಂಭವಿಸಿದ್ದರೆ, ಮುಂದಿನ ಕೇವಲ 3 ವಾರಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದೆ. ಇದು 2014-16ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಸಂಭವಿಸಿದ್ದ ಭೀಕರ ಎಬೋಲಾ ಸಾಂಕ್ರಾಮಿಕಕ್ಕಿಂತ ಮೂರು ಪಟ್ಟು ವೇಗವಾಗಿ ಹರಡುತ್ತಿದೆ.
ಪ್ರಸ್ತುತ ಹರಡುತ್ತಿರುವ ಸೋಂಕಿಗೆ ‘ಬಂಡಿಬುಗ್ಯೋ’ ಎಂಬ ಅಪರೂಪದ ಎಬೋಲಾ ವೈರಸ್ ಕಾರಣವಾಗಿದೆ. ಈ ನಿರ್ದಿಷ್ಟ ತಳಿಗೆ ಇದುವರೆಗೆ ಯಾವುದೇ ಅಧಿಕೃತ ಲಸಿಕೆ ಅಥವಾ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿಲ್ಲದಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ. ಪ್ರಸ್ತುತ ಇಟುರಿ ಪ್ರಾಂತ್ಯದಲ್ಲಿ ಪ್ರಾಯೋಗಿಕ ಹಂತದ ಲಸಿಕೆಗಳ ಪರೀಕ್ಷೆ ಆರಂಭಿಸಲಾಗಿದೆ.
ಈ ಹಿಂದಿನ ಎಬೋಲಾ ತಳಿಗಳಿಗೆ ಹೋಲಿಸಿದರೆ, ಪ್ರಸ್ತುತ ಸಾಂಕ್ರಾಮಿಕದಲ್ಲಿ ಮರಣ ಪ್ರಮಾಣ ಶೇ. 45.9 ರಷ್ಟಿದ್ದು, ರೋಗಿಗಳಿಗೆ ತಕ್ಷಣವೇ ಸೂಕ್ತ ವೈದ್ಯಕೀಯ ನೆರವು ಸಿಗದಿರುವುದೇ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ. ಹೆಚ್ಚಿನ ಜನರು ರೋಗಲಕ್ಷಣಗಳು ಕಾಣಿಸಿಕೊಂಡರೂ ಆರಂಭದಲ್ಲಿ ಸಾಂಪ್ರದಾಯಿಕ ಚಿಕಿತ್ಸೆಗಳತ್ತ ಮುಖ ಮಾಡುತ್ತಿದ್ದು, ಪರಿಸ್ಥಿತಿ ಗಂಭೀರವಾದ ಮೇಲಷ್ಟೇ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.
ಕಾಂಗೋ ದೇಶದ ಪೂರ್ವ ಭಾಗದ ಐದು ಪ್ರಾಂತ್ಯಗಳಲ್ಲಿ ಈ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಆದರೆ, ಈ ಭಾಗದಲ್ಲಿ ನಡೆಯುತ್ತಿರುವ ರೇಬೆಲ್ (ಸಶಸ್ತ್ರ ಬಂಡುಕೋರರ) ಸಂಘರ್ಷ, ಅಸಮರ್ಪಕ ರಸ್ತೆ ಸಂಪರ್ಕ ಹಾಗೂ ಸಂಪರ್ಕ ಸಾಧನಗಳ ಕೊರತೆಯಿಂದಾಗಿ ವೈದ್ಯಕೀಯ ತಂಡಗಳಿಗೆ ಸಮಯಕ್ಕೆ ಸರಿಯಾಗಿ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು ಕಷ್ಟಕರವಾಗಿದೆ. ಅಲ್ಲದೆ, ವೇತನ ಪಾವತಿಯಲ್ಲಿನ ವಿಳಂಬದಿಂದಾಗಿ ಆರೋಗ್ಯ ಕಾರ್ಯಕರ್ತರು ಕೆಲಸ ಸ್ಥಗಿತಗೊಳಿಸಿರುವುದು ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

