ವಿಕಿಪೀಡಿಯಾವನ್ನು ಎಡಪಂಥೀಯ ಕಾರ್ಯಕರ್ತರು ನಿಯಂತ್ರಿಸುತ್ತಿದ್ದಾರೆ, ಅದಕ್ಕೆ ದೇಣಿಗೆ ನೀಡಬೇಡಿ ಎಂದು ಬಿಲಿಯನೇರ್ ಎಲಾನ್ ಮಸ್ಕ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಹಂಚಿಕೊಂಡಿರುವ ಅವರು, ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧವನ್ನು ಯಾವ ರೀತಿ ತೋರಿಸಲಾಗಿದೆ ಎಂಬ ಸುದ್ದಿಯನ್ನು ಶೇರ್‌ ಮಾಡಿ, ವಿಕಿಪೀಡಿಯಾವನ್ನು ತೀವ್ರ ಎಡಪಂಥೀಯ ಕಾರ್ಯಕರ್ತರು ನಿಯಂತ್ರಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಸುತ್ತಲಿನ ನಿರೂಪಣೆಯನ್ನು ಮರುರೂಪಿಸಲು ಹಮಾಸ್ ಪರ ಅಭಿಪ್ರಾಯಗಳನ್ನು ಹೊಂದಿರುವ ಸರಿಸುಮಾರು 40 ವಿಕಿಪೀಡಿಯಾ ಸಂಪಾದಕರು ಸಂಘಟಿತ ಪ್ರಯತ್ನದಲ್ಲಿ ಕೆಲಸ ಮಾಡಿದ್ದಾರೆ ಎಂದು ವರದಿ ಹೇಳಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಆರು ವಾರಗಳ ನಂತರ, ವಿಕಿಪೀಡಿಯ ಸಂಪಾದಕರೊಬ್ಬರು ಯಹೂದಿಗಳ ನಿರ್ನಾಮ ಮತ್ತು ಇಸ್ರೇಲ್ ಸರ್ವನಾಶಕ್ಕಾಗಿ ಹಮಾಸ್‌ನ 1988 ರ ಚಾರ್ಟರ್‌ನ ಉಲ್ಲೇಖಗಳನ್ನು ಗುಂಪಿನ ವಿಕಿಪೀಡಿಯಾದಿಂದ ತೆಗೆದುಹಾಕಿದೆ ಎಂದು ಪೈರೇಟ್ ವೈರ್ಸ್‌ನ ವರದಿ ಮಾಡಿತ್ತು.

ಇಸ್ಲಾಮಿಕ್ ರಿಪಬ್ಲಿಕ್ ಪಾರ್ಟಿ ಅಧಿಕಾರಿಗಳು ಮಾಡಿರುವ ಮಾನವ ಹಕ್ಕುಗಳ ಅಪರಾಧಗಳನ್ನು ಅಳಿಸಿ ಹಾಕಲಾಗಿದೆ. ಹಲವಾರು ಲೇಖನಗಳಲ್ಲಿ ಇರಾನ್ ಸರ್ಕಾರದ ಹಿತಾಸಕ್ತಿಗಳನ್ನು ಉತ್ತೇಜಿಸಲು ಗುಂಪು ಪ್ರಯತ್ನಿಸುತ್ತಿದೆ ಎಂದು ಪೈರೇಟ್ ವೈರ್ಸ್‌ ತಿಳಿಸಿದೆ ಇದನ್ನು ಶೇರ್ ಮಾಡಿದ ಎಲಾನ್ ಮಸ್ಕ್, ವಿಕಿಪೀಡಿಯಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಹಾಗೂ ಇನ್ನು ತೀವ್ರ ಎಡಪಂಥೀಯ ಕಾರ್ಯಕರ್ತರು ನಿರ್ವಹಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.