ನವದೆಹಲಿ: ಪ್ರಧಾನಿ ಮೋದಿ ಅವರು ಎರಡು ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ. ಈ ವೇಳೆ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಸ್ಪರ ಆಲಂಗಿಸಿಕೊಂಡಿರುವುದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀಕ್ಷ್ಣವಾಗಿ ಟೀಕಿಸಿದ್ದಾರೆ.

‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕ ವಿಶ್ವದ ಅತ್ಯಂತ ರಕ್ತಸಿಕ್ತ ಕ್ರಿಮಿನಲ್‌ನನ್ನು ಆಲಂಗಿಸಿದ್ದಾರೆ’ ಎಂದು ಟೀಕಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ಮೋದಿಯವರ ಭೇಟಿಯ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ ಮತ್ತು ಇದು ಶಾಂತಿ ಪ್ರಯತ್ನಗಳಿಗೆ ‘ದೊಡ್ಡ ಹೊಡೆತ’ ಎಂದು ಬಣ್ಣಿಸಿದ್ದಾರೆ.

ಮಾಸ್ಕೋದ ನೊವೊ-ಒಗರಿಯೋವೊದಲ್ಲಿರುವ ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ‘ಕ್ರೆಮ್ಲಿನ್’ನಲ್ಲಿ ಪ್ರಧಾನಿ ಮೋದಿ ಅವರು ಸೋಮವಾರ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಿದರು. ಕ್ರೆಮ್ಲಿನ್‌ನಲ್ಲಿ ನಡೆದ ಸಭೆಯಲ್ಲಿ ರಷ್ಯಾ ಅಧ್ಯಕ್ಷರು ಮತ್ತು ಪ್ರಧಾನಿ ಮೋದಿ ಪರಸ್ಪರ ಅಪ್ಪುಗೆಯ ಮೂಲಕ ಶುಭಾಶಯ ಕೋರಿದರು. ಫೆಬ್ರವರಿ 2022 ರಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಇದು ರಷ್ಯಾಕ್ಕೆ ಅವರ ಮೊದಲ ಭೇಟಿಯಾಗಿದೆ