ಲಖನೌ: ಪತ್ನಿ ಅನುಮತಿ ಕೇಳದೆ ಐಬ್ರೋ ಮಾಡಿಸಿಕೊಂಡಿದ್ದಾಳೆ ಎಂದು ಕೋಪಗೊಂಡ ಪತಿ ಆಕೆಗೆ ವಿಡಿಯೋ ಕಾಲ್ನಲ್ಲೇ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಐಬ್ರೋ ಮಾಡಿಸಿದ ಕಾರಣಕ್ಕೆ ಆಕೆಗೆ ಮೂರು ಬಾರಿ ನಿಷೇಧಿತ ತಲಾಖ್ ಹೇಳಿದ ಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಯಾಗ್ರಾಜ್ ನಿವಾಸಿಯಾಗಿರುವ ಮಹಮ್ಮದ್ ಸಲೀಂ ಸದ್ಯ ಪ್ರಯಾಗ್ರಾಜ್ ದಲ್ಲಿ ನೆಲೆಸಿದ್ದು, ಆತನ ಪತ್ನಿ ಗುಲ್ಸಾಬಾ ಕಾನ್ಪುರದಲ್ಲಿ ವಾಸವಿದ್ದಾಳೆ. ಹೀಗಿರುವಾಗ ಗುಲ್ಸಾಬಾ ಜತೆ ಸಲೀಂ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದಾಗ ಆಕೆ ಐಬ್ರೋ ಮಾಡಿಸಿದ್ದನ್ನು ನೋಡಿದ್ದಾನೆ.
ತನ್ನ ಅನುಮತಿ ಇಲ್ಲದೇ ಐಬ್ರೋ ಮಾಡಿಸಿಕೊಂಡೆ ಏಕೆ ಎಂದು ಕೋಪಗೊಂಡ ಸಲೀಂ, ವಿಡಿಯೋ ಕಾಲ್ನಲ್ಲಿ ಪತ್ನಿಗೆ ತಲಾಖ್ ನೀಡಿದ್ದಾನೆ. ಬಳಿಕ, ಇನ್ನು ನೀನು ಸ್ವತಂತ್ರಳು, ಏನು ಬೇಕಾದರೂ ಮಾಡಿಕೋ ಎಂದು ಹೇಳಿದ್ದಾನೆ. ಬಳಿಕ ಗುಬ್ಸಾನಾ ಪತಿ ವಿರುದ್ಧ ತಲಾಖ್ ಕೇಸು, ತನ್ನ ಅತ್ತೆ ಮಾವ ಹಾಗೂ ಪತಿ ವಿರುದ್ಧ ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.