ಚೆನ್ನೈ: ಕಳೆದ ಕೆಲ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ನಟ ಧನುಷ್ ಹಾಗೂ ಐಶ್ವರ್ಯಾ ರಜಿನಿಕಾಂತ್ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
ನಿರ್ದೇಶಕಿ ಐಶ್ವರ್ಯಾ ರಜಿನಿಕಾಂತ್ ಮತ್ತು ನಟ-ನಿರ್ದೇಶಕ ಧನುಷ್ ಇತ್ತೀಚೆಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ – ಸೆಕ್ಷನ್ 13 ಬಿ ಅಡಿಯಲ್ಲಿ ಅವರು ಅರ್ಜಿ ಸಲ್ಲಿಸಿದ್ದಾರೆ ಎಂದು ದಂಪತಿಗಳ ನಿಕಟ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ. 2022ರ ಜನವರಿಯಲ್ಲಿ ಧನುಷ್ – ಐಶ್ವರ್ಯಾ ತಾವು ದೂರವಾಗುವುದಾಗಿ ಹೇಳಿದ್ದರು. 18 ವರ್ಷಗಳ ದಾಂಪತ್ಯ ಜೀವನದಿಂದ ಪ್ರತ್ಯೇಕವಾಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಚಾರವನ್ನು ಹಂಚಿಕೊಂಡಿದ್ದರು.
ಇದೀಗ ಸುಮಾರು ಒಂದೂವರೆ ವರ್ಷದ ನಂತರ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಅವರ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ವರದಿ ತಿಳಿಸಿದೆ.