ಜಾಗತಿಕವಾಗಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಯಿತೆಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಮತ್ತೆ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ.
ಇದೀಗ ಶಾಲಾ-ಕಾಲೇಜುಗಳಲ್ಲಿ ಸಾಮೂಹಿಕವಾಗಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದ್ದು, ತೆಲಂಗಾಣದ ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿ ಸೇರಿ 30 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸದ್ಯ ಯೂನಿವರ್ಸಿಟಿಯನ್ನು ಲಾಕ್ ಮಾಡಲಾಗಿದೆ. ಈ ಯೂನಿವರ್ಸಿಟಿಯಲ್ಲಿ ಒಟ್ಟು ವಿದ್ಯಾರ್ಥಿಗಳು, ಶಿಕ್ಷಕ ಸಿಬ್ಬಂದಿಯೆಲ್ಲ ಸೇರಿ 1700 ಮಂದಿ ಇದ್ದಾರೆ. ಎಲ್ಲರಿಗೂ ಮನೆಯಲ್ಲಿ ಐಸೋಲೇಟ್ ಆಗಲು ಸೂಚಿಸಲಾಗಿದೆ.
ಸೋಂಕು ದೃಢಪಟ್ಟವರಲ್ಲಿ 25 ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಉಳಿದ ಐವರು ಶಿಕ್ಷಕರು. ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೇ ಅವರು ಐಸೋಲೇಟ್ ಆಗಿದ್ದಾರೆ. ಸದ್ಯಕ್ಕಂತೂ ಯಾರ ಸ್ಥಿತಿಯೂ ಗಂಭೀರ ಪರಿಸ್ಥಿತಿ ತಲುಪಿಲ್ಲ. ಸೋಂಕು ದೃಢಪಟ್ಟ ಎಲ್ಲರು ಎರಡು ಡೋಸ್ ಲಸಿಕೆ ಪಡೆದವರೇ ಆಗಿದ್ದಾರೆ ಎಂದು ಉಪ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.