ಚೆನ್ನೈ: ಮನೆಗೆ ತೆರಳುತ್ತಿದ್ದ ಶಾಲಾ ಬಾಲಕಿಯ ಮೇಲೆ ಹಸುವೊಂದು ದಾಳಿ ನಡೆಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ದಾಳಿಯಿಂದ ಗಾಯಗೊಂಡ 9 ವರ್ಷದ ಆಯಿಷಾ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆಯಿಷಾ ಬುಧವಾರ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆಯಲ್ಲಿ ಅವಳ ಮುಂದೆ ಇದ್ದ ಹಸು ಇದ್ದಕ್ಕಿದ್ದಂತೆ ತಿರುಗಿ ಅವಳ ಮೇಲೆ ದಾಳಿ ನಡೆಸಿದೆ. ವೈರಲ್ ಆಗಿರುವ ಆತಂಕಕಾರಿ ವೀಡಿಯೊದಲ್ಲಿ, ಹಸು ಮಗುವಿನ ಮೇಲೆ ಪದೇ ಪದೇ ದಾಳಿ ಮಾಡುವುದನ್ನು, ತನ್ನ ಕೊಂಬುಗಳಿಂದ ಎತ್ತಿ ನೆಲಕ್ಕೆ ಎಸೆಯುವುದನ್ನು ಕಾಣಬಹುದು.
ಬಾಲಕಿ ಮತ್ತು ಆಕೆಯ ತಾಯಿಯ ಕಿರುಚಾಟವನ್ನು ಕೇಳಿದ ಜನರು ಅವಳಿಗೆ ಸಹಾಯ ಮಾಡಲು ತಮ್ಮ ಮನೆಗಳಿಂದ ಹೊರಬಂದರು. ಕೆಲವು ಪುರುಷರು ಹಸುವನ್ನು ಕಲ್ಲುಗಳನ್ನು ಎಸೆಯುವ ಮೂಲಕ ಮತ್ತು ಕೂಗುವ ಮೂಲಕ ಹೆದರಿಸಲು ಪ್ರಯತ್ನಿಸಿದರು. ಆದರೆ ಹಸು ಮಗುವನ್ನು ಎಡೆಬಿಡದೆ ಹಿಂಬಾಲಿಸಿತು. ಹಸುವಿನ ದಾಳಿಯಿಂದಾಗಿ ಬಾಲಕಿಯ ತಲೆಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಚೆನ್ನೈ ಪಾಲಿಕೆ ಅಧಿಕಾರಿಗಳು ಹಸುಗಳನ್ನು ಹಿಡಿದಿದ್ದು, ಇವುಗಳ ಮಾಲೀಕರಿಗೆ 2000 ರೂ ದಂಡ ವಿಧಿಸಿರುವುದಾಗಿ ತಿಳಿಸಿದ್ದಾರೆ.