ಹೊಸದಿಲ್ಲಿ: ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ ಮತ್ತೆ ಪೆರೋಲ್ ಮಂಜೂರಾಗಿದೆ. ಈ ಹಿನ್ನೆಲೆ ಜೈಲಿನಿಂದ ಬಿಡುಗಡೆಯಾಗ್ತಿದ್ದು, 50 ದಿನಗಳ ಕಾಲ ಜೈಲಿನಿಂದ ಹೊರಗಿರಲಿದ್ದಾರೆ ಎಂದೂ ತಿಳಿದುಬಂದಿದೆ.
ಅಲ್ಲದೆ, ಇದು ಕಳೆದ 24 ತಿಂಗಳುಗಳಲ್ಲಿ ರಾಮ್ ರಹೀಮ್ ಸಿಂಗ್ ಅವರ 7ನೇ ಪೆರೋಲ್ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ 9ನೆಯದು ಎಂದೂ ವರದಿಯಾಗಿದೆ. ಹರ್ಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿರೋ ರಾಮ್ ರಹೀಮ್ ಸಿಂಗ್ ಕಳೆದ ವರ್ಷ 3 ಸಲ ಪೆರೋಲ್ನಲ್ಲಿ, ಅಂದರೆ ಬರೋಬ್ಬರಿ 91 ದಿನಗಳ ಕಾಲ ಬಿಡುಗಡೆಯಾಗಿದ್ದರು.
ನವೆಂಬರ್ನಲ್ಲಿ 21 ದಿನ, ಜುಲೈನಲ್ಲಿ 30 ದಿನಗಳು ಮತ್ತು ಜನವರಿಯಲ್ಲಿ ಡೇರಾ ಸಚ್ಚಾ ಸೌದಾ ಮಾಜಿ ಮುಖ್ಯಸ್ಥ ಶಾ ಸತ್ನಾಮ್ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು 40 ದಿನ ಬಿಡುಗಡೆಯಾಗಿದ್ದರು.