ಮುಂಬೈ: ವಿಲೀನ ಒಪ್ಪಂದದಿಂದ ಹೊರ ನಡೆದ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ ಸಂಸ್ಥೆ ವಿರುದ್ಧ ಝೀ ಎಂಟರ್ಟೈನ್ಮೆಂಟ್ ಕೋರ್ಟ್ ಬಾಗಿಲು ತಟ್ಟಿದೆ.
ವರದಿ ಪ್ರಕಾರ, ಝೀ ಸಂಸ್ಥೆ ಮುಂಬೈ ಬೆಂಚ್ನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಬಳಿ ಸೋನಿ ವಿರುದ್ಧ ಅರ್ಜಿ ಹಾಕಿದ್ದು, ವಿಲೀನ ಒಪ್ಪಂದವನ್ನು ಜಾರಿಗೊಳಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದೆ. ವರದಿ ಪ್ರಕಾರ ಝೀ ಸಂಸ್ಥೆ ಸಿಂಗಾಪುರ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಕೋರ್ಟ್ನ ಮೆಟ್ಟಿಲನ್ನೂ ಹತ್ತಿರುವುದು ತಿಳಿದು ಬಂದಿದೆ.
ಇನ್ನು ಅವ್ಯವಹಾರ ಪ್ರಕರಣವೊಂದರಲ್ಲಿ ಝೀ ಎಂಡಿ ಮತ್ತು ಸಿಇಒ ಪುನೀತ್ ಗೋಯಂಕಾ ಹೆಸರು ತಳಕುಹಾಕಿಕೊಂಡಿದ್ದು, ನ್ಯಾಯಾಲಯದಲ್ಲಿ ಇನ್ನೂ ಬಗೆಹರಿದಿಲ್ಲ. ಈ ಕಳಂಕ ಇರುವ ಪುನೀತ್ ಗೋಯಂಕಾ ಅವರು ವಿಲೀನಗೊಂಡ ಸಂಸ್ಥೆಯ ಸಿಇಒ ಆಗಬಾರದು ಎನ್ನುವುದು ಸೋನಿ ಪಿಕ್ಚರ್ಸ್ ಹಿಡಿದಿದ್ದ ಪಟ್ಟು. ಇದಕ್ಕೆ ಝೀ ಒಪ್ಪಿಲ್ಲ ಎನ್ನಲಾಗಿದೆ. ಈ ವಿಚಾರವಾಗಿಯೇ ಸೋನಿ ಸಂಸ್ಥೆ ಝೀ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿರಬಹುದು ಎಂದು ಹೇಳಲಾಗಿದೆ.