ಮುಂಬೈ: ಘಾಟ್ಕೋಪರ್ ಪ್ರದೇಶದಲ್ಲಿ ಆಸ್ಪತ್ರೆ ಸಮೀಪದ ಕಟ್ಟಡವೊಂದರಲ್ಲಿ ಶನಿವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, 46 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯಲ್ಲಿದ್ದ 22 ಮಂದಿ ರೋಗಿಗಳನ್ನು ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆರು ಅಂತಸ್ತಿನ ವಿಶ್ವಾಸ್ ಬಿಲ್ಡಿಂಗ್ನ ಕೆಳಮಹಡಿಯ ಹೋಟೆಲ್ನ ವಿದ್ಯುತ್ ಮೀಟರ್ ಇರುವ ಕೊಠಡಿಯಲ್ಲಿ ಮಧ್ಯಾಹ್ನ ಎರಡು ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳ ಮತ್ತು ಪೊಲೀಸರು ಬೆಂಕಿಯಲ್ಲಿ ಸಿಲುಕಿದ್ದ ಮೂರು ಮಂದಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ರಾಜವಾಡಿ ಆಸ್ಪತ್ರೆಗೆ ದಾಖಲಿಸಿದರು. ಖುರೇಷಿ ದೇದಿಯಾ ಎಂಬುವವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.