ಮಧ್ಯಪ್ರದೇಶ: ಇಂದೋರ್ನಲ್ಲಿ ಓರ್ವ ಯುವಕ ತನ್ನ ಪತ್ನಿಗೆ ವಾಟ್ಸಾಪ್ ವಾಯ್ಸ್ ನೋಟ್ ಮೂಲಕ ತ್ರಿವಳಿ ತಲಾಖ್ ನೀಡಿರುವ ಘಟನೆ ನಡೆದಿದೆ.
ಇದೀಗ ತಲಾಖ್ ನೀಡಿದ 27 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ನಿನ್ನೆ (ಜ. 2) ರಂದು ಮಾಹಿತಿ ನೀಡಿದ್ದಾರೆ.
23 ವರ್ಷದ ಪತ್ನಿ ನೀಡಿದ ದೂರಿನ ಮೇರೆಗೆ ಆತನ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈ ದಂಪತಿಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಮಗಳಿದ್ದಾಳೆ. ಮದುವೆಯಾದ ಮೂರು ತಿಂಗಳ ನಂತರ ಪತಿ ತನಗೆ ಕಿರುಕುಳ ನೀಡಲಾರಂಭಿಸಿದ ಮತ್ತು ಗರ್ಭಿಣಿಯಾದಾಗ ತನ್ನ ಚಾರಿತ್ರ್ಯ ಹರಣ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.