ಕೊಚ್ಚಿ: ಕೇರಳದಲ್ಲಿ ನಿಫಾ ವೈರಸ್ ಅಬ್ಬರ ಹೆಚ್ಚಿದ್ದು, ಕೋಝಿಕೋಡ್ನಲ್ಲಿ ಇಬ್ಬರು ಸಾವನ್ನಪ್ಪಿದ ಬಳಿಕ ವೈರಸ್ ಆತಂಕ ಹೆಚ್ಚಿದೆ. ಈ ನಡುವೆ ಕೇರಳ ಸರ್ಕಾರ ಕೋಝಿಕೋಡ್ನಲ್ಲಿ ಏಳು ಗ್ರಾಮ ಪಂಚಾಯಿತಿಗಳನ್ನು ಕಂಟೈನ್ ಮೆಂಟ್ ವಲಯಗಳಾಗಿ ಘೋಷಣೆ ಮಾಡಿದೆ. ಜೊತೆಗೆ ಸೋಂಕು ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಕೋಝಿಕೋಡ್ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕ ಸೇರಿದಂತೆ ನಾಲ್ವರಲ್ಲಿ ನಿಫಾ ವೈರಸ್ ಸೋಂಕು ದೃಢಪಟ್ಟ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ. ಸೋಂಕು ಪೀಡಿತ ಪ್ರದೇಶಗಳಲ್ಲಿ ಸರ್ಕಾರ ಶಾಲೆ, ಕಚೇರಿಗಳನ್ನು ಮುಚ್ಚಿದೆ.
ಅಂತಂಚೇರಿ, ಮಾರತೊಂಕರ, ತಿರುವಳ್ಳೂರು, ಕುಟ್ಟಿಯಾಡಿ, ಕಾಯಕ್ಕೊಡಿ, ವಿಲ್ಯಪಲ್ಲಿ, ಕವಿಲುಂಪಾರ, ಪಂಚಾಯಿತಿಗಳನ್ನು ಕಂಟೈನ್ಮೆಂಟ್ ವಲಯಗಳಾಗಿ ಘೋಷಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.