ಶ್ರೀನಗರ: ಜಮ್ಮು ಮತ್ತು ಕಾಶ್ಮೀರವು ಮುಂದಿನ ದಿನಗಳಲ್ಲಿ ಸಾರಿಗೆ ಮೂಲಸೌಲಭ್ಯದಲ್ಲಿ ಒಂದು ಹೆಜ್ಜೆ ಮುಂದಿರಲಿದೆ. ಅಲ್ಲದೇ ಐತಿಹಾಸಿಕ ರೈಲ್ವೆ ಮಾರ್ಗ ಇಂದಿನಿಂದ ಕಣಿವೆ ಪ್ರದೇಶಗಳ ನಿವಾಸಿಗಳ ಸಂಚಾರಕ್ಕಾಗಿ ತೆರೆದುಕೊಳ್ಳಲಿದೆ.
ಹೌದು, ಜಮ್ಮುವಿನಲ್ಲಿ ಇಂದು (ಫೆಬ್ರವರಿ 20) ಪ್ರಧಾನಿ ಮೋದಿಯವರು ಪ್ರಮುಖ ರೈಲ್ವೆ ಮಾರ್ಗದ ಜೊತೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ 209 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪಿಎಂಒ ಮಾಹಿತಿ ನೀಡಿದೆ.
ಇಂದು ಪ್ರಧಾನಮಂತ್ರಿಗಳು 15,863 ಕೋಟಿ ವೆಚ್ಚದ ಇಲ್ಲಿನ ಬಾನಿಹಾಲ್-ಖಾರಿ-ಸುಂಬರ್-ಸಂಗಲ್ದನ್ ನಡುವಿನ ಹೊಸ 48 ಕಿಮೀ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇನ್ನೂ ಒಟ್ಟು 470.23 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ 185.66 ಕಿಮೀ ಬಾರಾಮುಲ್ಲಾ-ಶ್ರೀನಗರ-ಬಾನಿಹಾಲ್-ಸಂಗಲ್ದನ್ ರೈಲು ಮಾರ್ಗವನ್ನು ವಿದ್ಯುದೀಕರಿಸಲಾಗಿದೆ.
ಜಮ್ಮುವಿನಲ್ಲಿ ಸಿಯುಎಫ್ (ಸಾಮಾನ್ಯ ಬಳಕೆದಾರ ಸೌಲಭ್ಯ) ಪೆಟ್ರೋಲಿಯಂ ಡಿಪೋವನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಪ್ರಧಾನಮಂತ್ರಿ ಅಡಿಪಾಯ ಹಾಕಲಿದ್ದಾರೆ. ಅತ್ಯಾಧುನಿಕ ಸಂಪೂರ್ಣ ಸ್ವಯಂಚಾಲಿತ ಡಿಪೋ ಸುಮಾರು 677 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿದ್ದು, ಮೋಟಾರ್ ಸ್ಪಿರಿಟ್ (MS), ಹೈಸ್ಪೀಡ್ ಡೀಸೆಲ್ (HSD), ಸುಪೀರಿಯರ್ ಸೀಮೆಎಣ್ಣೆ (SKO) ಸಂಗ್ರಹಿಸಲು ಸುಮಾರು 100000 KL ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿರುತ್ತದೆ.
ಇನ್ನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಮಗ್ರ, ಗುಣಮಟ್ಟದ ಮತ್ತು ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವುದಕ್ಕಾಗಿ ಪ್ರಧಾನಿ ಮೋದಿ, ಜಮ್ಮು ನ ವಿಜಯಪುರ (ಸಾಂಬಾ)ದಲ್ಲಿ ಏಮ್ಸ್ ಉದ್ಘಾಟಿಸಲಿದ್ದಾರೆ.