News Karnataka Kannada
Saturday, May 04 2024
ದೇಶ

ಬಾಹ್ಯಾಕಾಶದಿಂದ ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟ ಇಸ್ರೋ

Isro
Photo Credit : NewsKarnataka

ನವದೆಹಲಿ: ತಾನು ಹೊಂದಿರುವ ಅಪಾರ ಪ್ರಮಾಣದ ಹಿಮ ನದಿಗಳು (ಗ್ಲೇಸಿಯರ್‌ಗಳು) ಮತ್ತು ಮಂಜಿನ ಕಾರಣದಿಂದ, ಜಗತ್ತಿನ ಮೂರನೇ ಸ್ತಂಭ ಎಂದು ಹೆಸರಾಗಿರುವ ಹಿಮಾಲಯ ಪರ್ವತಗಳು ಜಾಗತಿಕ ಹವಾಮಾನ ಬದಲಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇಂತಹ ಹವಾಮಾನ ಬದಲಾವಣೆಗಳು ಹಿಮಾಲಯ ಪರ್ವತಗಳ ಭೌತಿಕ ವೈಶಿಷ್ಟ್ಯಗಳ ಮೇಲೆ ಮತ್ತು ಅವುಗಳ ಸುತ್ತಲೂ ವಾಸಿಸುವ ಜನರ ಮೇಲೂ ಪರಿಣಾಮ ಬೀರುತ್ತವೆ.

ಜಗತ್ತಿನಾದ್ಯಂತ ನಡೆದ ವಿವಿಧ ಸಂಶೋಧನೆಗಳ ಪ್ರಕಾರ, 18ನೇ ಶತಮಾನದಲ್ಲಿ ಔದ್ಯಮಿಕ ಕ್ರಾಂತಿ ಆರಂಭಗೊಂಡ ಬಳಿಕ, ಜಗತ್ತಿನೆಲ್ಲೆಡೆ ಹಿಮನದಿಗಳು ಕರಗುವ ಮತ್ತು ತೆಳ್ಳಗಾಗುವ ವೇಗ ಹಿಂದೆಂದೂ ಕಾಣದಷ್ಟು ಅತ್ಯಂತ ಹೆಚ್ಚಾಗಿವೆ ಎಂದು ಸೂಚಿಸಿವೆ.

ಹಿಮಾಲಯ ಪರ್ವತ ಶ್ರೇಣಿಯನ್ನು ತಲುಪುವುದು ಅತ್ಯಂತ ಕಷ್ಟಕರವೂ, ಹಿಮಾಲಯದ ಪರ್ವತ ಪ್ರದೇಶ ಅತ್ಯಂತ ಕಠಿಣವೂ ಆಗಿರುವುದರಿಂದ, ಈ ಹಿಮ ಸರೋವರಗಳು ಹೇಗೆ ಉಂಟಾಗುತ್ತವೆ ಮತ್ತು ಹೇಗೆ ವೃದ್ಧಿಸುತ್ತವೆ ಎನ್ನುವುದರ ಸಂಶೋಧನೆ ನಡೆಸುವುದು ಪ್ರಯಾಸದ ವಿಚಾರ.

ಆದರೆ ಸ್ಯಾಟಲೈಟ್ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ವಿಶಾಲ ಪ್ರದೇಶದ ವ್ಯಾಪ್ತಿಯನ್ನು ಗಮನಿಸಬಲ್ಲದಾಗಿದ್ದು, ನಿರಂತರವಾಗಿ ಆ ಪ್ರದೇಶಗಳನ್ನು ಗಮನಿಸುವುದರಿಂದ, ಈ ತಂತ್ರಜ್ಞಾನ ಹಿಮ ಸರೋವರಗಳ ಅಧ್ಯಯನಕ್ಕೆ ಪೂರಕವಾಗಿದೆ. ವಿವಿಧ ಕಾಲಮಾನಗಳಲ್ಲಿ ಹಿಮ ಸರೋವರಗಳನ್ನು ಗಮನಿಸುವುದರಿಂದ, ಅವುಗಳು ಎಷ್ಟು ವೇಗವಾಗಿ ಕರಗುತ್ತಿವೆ ಎನ್ನುವುದನ್ನು ತಿಳಿಯಲು, ಸರೋವರಗಳಿಂದ ನೀರು ಹೊರ ಧುಮುಕುವುದರಿಂದ ಉಂಟಾಗುವ ಪ್ರವಾಹದ ಅಪಾಯವನ್ನು ಅಂದಾಜಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.

ಕಳೆದ 30ರಿಂದ 40 ವರ್ಷಗಳ ಉಪಗ್ರಹ ಮಾಹಿತಿಗಳು ಹಿಮನದಿಗಳಿಂದ ಆವೃತವಾದ ಪ್ರದೇಶದಲ್ಲಿನ ಬದಲಾವಣೆಯ ಕುರಿತು ವಿವರಗಳನ್ನು ಒದಗಿಸಿವೆ. ಭಾರತದ ಹಿಮಾಲಯ ಪ್ರದೇಶದ ದೀರ್ಘಾವಧಿಯ, ಅಂದರೆ 1984ರಿಂದ 2023ರ ನಡುವಿನ ಉಪಗ್ರಹ ಚಿತ್ರಗಳು ಹಿಮ ಸರೋವರಗಳಲ್ಲಿನ ಪ್ರಮುಖ ಬದಲಾವಣೆಗಳನ್ನು ತೋರಿಸುತ್ತಿವೆ.

ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯ ಮೂಲಕ ಎಪ್ರಿಲ್ 22ರಂದು ಟ್ವೀಟ್ ಮಾಡಿದ ಇಸ್ರೋ, 2016-17ರ ಅವಧಿಯಲ್ಲಿ ಗುರುತಿಸಿದ, 10 ಹೆಕ್ಟೇರ್‌ಗೂ ಹೆಚ್ಚಿನ (24.71 ಎಕರೆ) ವ್ಯಾಪ್ತಿ ಹೊಂದಿರುವ 2,431 ಸರೋವರಗಳ ಪೈಕಿ, 676 ಸರೋವರಗಳು 1984ರ ಬಳಿಕ ಸಾಕಷ್ಟು ದೊಡ್ಡವಾಗಿವೆ. ಅದರಲ್ಲೂ ಇವುಗಳ ಪೈಕಿ ಭಾರತದ ಒಳಗಿರುವ, 130 ವೃದ್ಧಿಯಾಗುತ್ತಿರುವ ಸರೋವರಗಳು ವಿವಿಧ ನದಿ ಪಾತ್ರಗಳಲ್ಲಿ ಹಂಚಿಕೆಯಾಗಿವೆ. ಇವುಗಳಲ್ಲಿ 65 ಸರೋವರಗಳು ಸಿಂಧೂ ನದಿ ಪಾತ್ರದಲ್ಲಿದ್ದರೆ, 7 ಗಂಗಾ ನದಿ ಪಾತ್ರದಲ್ಲೂ, 58 ಬ್ರಹ್ಮಪುತ್ರಾ ನದಿ ಪಾತ್ರದಲ್ಲಿವೆ ಎಂದಿದೆ.

ಇಲ್ಲಿ 601 ಸರೋವರಗಳ (89%) ಗಾತ್ರ ಎರಡು ಪಟ್ಟಿಗಿಂತಲೂ ಹೆಚ್ಚು ದೊಡ್ಡದಾಗಿವೆ. 10 ಸರೋವರಗಳು 1.5ರಿಂದ 2 ಪಟ್ಟು ದೊಡ್ಡದಾಗಿವೆ.
ಹಾಗೂ 65 ಸರೋವರಗಳು 1.5 ಪಟ್ಟು ದೊಡ್ಡದಾಗಿವೆ.

ಇನ್ನು ಈ ಅಂಕಿ ಅಂಶಗಳನ್ನು ಆಧರಿಸಿರುವ ಒಂದು ವಿಶ್ಲೇಷಣೆಯ ಪ್ರಕಾರ, 314 ಸರೋವರಗಳು 4,000 ದಿಂದ 5,000 ಮೀಟರ್‌ಗಳಷ್ಟು ಎತ್ತರದಲ್ಲಿವೆ. ಇನ್ನೂ 296 ಸರೋವರಗಳು 5,000 ಮೀಟರ್‌ಗೂ ಹೆಚ್ಚಿನ ಎತ್ತರದಲ್ಲಿವೆ. ಕಾಲ ಕಾಲಕ್ಕೆ ಉಪಗ್ರಹಗಳು ಕಲೆಹಾಕುವ ಮಾಹಿತಿಗಳು ಹಿಮ ಸರೋವರಗಳು ಹೇಗೆ ವರ್ತಿಸುತ್ತವೆ ಎಂಬ ಮಾಹಿತಿಗಳನ್ನು ಒದಗಿಸುತ್ತವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು