ಗುರುಗ್ರಾಮ್: ಮ್ಯಾಕ್ಸ್ ಹೆಲ್ತ್ಕೇರ್ ಇನ್ಸ್ಟಿಟ್ಯೂಟ್ ಲಿಮಿಟೆಡ್ ಹೆಸರಿನಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಿ ಮೂತ್ರಪಿಂಡ ಮಾರಾಟಕ್ಕಾಗಿ ಗ್ರಾಹಕರನ್ನು ಹುಡುಕುತ್ತಿರುವ ಕುರಿತು ದೂರು ದಾಖಲಾಗಿದೆ.
ಮ್ಯಾಕ್ಸ್ ಹೆಲ್ತ್ಕೇರ್ ಆಸ್ಪತ್ರೆ ಪರವಾಗಿ ಹಾರ್ದಿಕ್ ಗಾಂಧಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಆಸ್ಪತ್ರೆ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದಿರುವುದು ತಿಳಿದುಬಂದಿತ್ತು. ಆಸ್ಪತ್ರೆಯ ವೈದ್ಯರಾದ ದಿನೇಶ್ ಖುಲ್ಲಾರ್ ಅವರ ಹೆಸರನ್ನೂ ವೆಬ್ಸೈಟ್ ಪ್ರಕಟ ಮಾಡಲಾಗಿದೆ. ಅಲ್ಲದೇ ಮೂತ್ರಪಿಂಡವನ್ನು ಮಾರಾಟ ಮಾಡಲು ಬಯಸುವವರು ವೆಬ್ಸೈಟ್ ಸಂಪರ್ಕಿಸುವಂತೆ ತಿಳಿಸಲಾಗಿದೆ.
ಇದರಿಂದ ಆಸ್ಪತ್ರೆ ಪ್ರತಿಷ್ಠೆ ಮತ್ತು ಗೌರವಕ್ಕೆ ಧಕ್ಕೆಯಾಗಿದೆ. “ಮ್ಯಾಕ್ಸ್ ಹೆಲ್ತ್ಕೇರ್ ಲಿಮಿಟೆಡ್ ಮೂತ್ರಪಿಂಡಗಳ ಕಳ್ಳಸಾಗಣೆ ವಿರೋಧಿಸುತ್ತದೆ. ಈ ನಿಟ್ಟಿನಲ್ಲಿ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಆಸ್ಪತ್ರೆ ಮುಖ್ಯಸ್ಥರು ತಿಳಿಸಿದ್ದಾರೆ.