ನವದೆಹಲಿ: ರಾಷ್ಟ್ರೀಯ ತನಿಖಾ ದಳ ಮೋಸ್ಟ್ ವಾಂಟೆಡ್ ದರೋಡೆಕೋರರಲ್ಲಿ ಒಬ್ಬನಾದ ಮೊಹಮ್ಮದ್ ಗೌಸ್ ನಿಯಾಜಿನನ್ನ ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ಬಂಧಿಸಿದೆ.
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ನಾಯಕ ಮೊಹಮ್ಮದ್ ಗೌಸ್ ನಿಯಾಜಿ, 2016ರಲ್ಲಿ ಬೆಂಗಳೂರಿನಲ್ಲಿ ಆರ್ಎಸ್ಎಸ್ ಮುಖಂಡ ರುದ್ರೇಶ್ ಎಂಬಾತನನ್ನ ಹತ್ಯೆಗೈದಿದ್ದ. ಘಟನೆ ನಂತರ ದೇಶದಿಂದ ಪಲಾಯನ ಮಾಡಿದ್ದ ನಿಯಾಜಿ, ವಿವಿಧ ದೇಶಗಳಲ್ಲಿ ತಲೆ ಮರೆಸಿಕೊಂಡಿದ್ದ.
ತನಿಖೆಯ ಮುಂದಾಳತ್ವ ವಹಿಸಿದ್ದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ನಿಯಾಜಿಯ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಕೊನೆಗೆ ಆತ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಬಗ್ಗೆ ಸುಳಿವು ಸಿಕ್ಕಿತು. ಕೂಡಲೇ ಈ ಮಾಹಿತಿಯನ್ನು ಕೇಂದ್ರದ ಭದ್ರತಾ ಏಜೆನ್ಸಿಗೆ ರವಾನಿಸಿತು. ನಂತರ ಎನ್ಐಎ ದಕ್ಷಿಣ ಆಫ್ರಿಕಾದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ಎನ್ಐಎ ಏಜೆನ್ಸಿಯು ನಿಯಾಜಿಯ ಪತ್ತೆಗಾಗಿ 5 ಲಕ್ಷ ರೂ.ಗಳ ಬಹುಮಾನ ಘೋಷಣೆ ಮಾಡಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.