ನವದೆಹಲಿ: ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಈ ವಿಚಾರದಲ್ಲಿ ನಮ್ಮ ರಾಜ್ಯದ ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ ಎಂದಿದ್ದಾರೆ. ದೆಹಲಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್.ಡಿ ದೇವೆಗೌಡ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಮಹತ್ತರವಾದ ಪೆಟ್ಟು ಎಂದು ಹೇಳಿದ್ದಾರೆ.
ಬೆಂಗಳೂರಿಗೆ ಕುಡಿಯುವ ನೀರು ಬೇಕು. ಮುಂದೇನು ಆಗುತ್ತದೆ ಎಂದು ಗೊತ್ತಿಲ್ಲ. ನಮ್ಮ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಯ ಒಂದು ದುರಂತ. ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ ಎಂದರು.
2024ರ ಲೋಕಸಭೆ ಚುನಾವಣೆ ಸಂಬಂಧಿಸಿ ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಚರ್ಚೆ ನಡೆದಿಲ್ಲ. ನಾನು ಯಾವತ್ತೂ ಕೂಡ ಪ್ರಧಾನಿ ಅವರನ್ನು ಭೇಟಿಯಾಗಿಲ್ಲ. ಚರ್ಚೆಗೆ ಬಂದಾಗ ಮಾತನಾಡುತ್ತೇವೆ. ಈಗ ಎಲ್ಲಿದ್ದೇವೆ ಅಲ್ಲೇ ಇರುತ್ತೇವೆ ಎಂದರು.