ನವದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆ (NEET-2024) ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದು ನ್ಯಾಷ್ನಲ್ ಟೆಸ್ಟಿಂಗ್ ಏಜನ್ಸಿ ಸ್ಪಷ್ಟನೆ ನೀಡಿದೆ.
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದೆ ಎಂಬ ಸುದ್ದಿಯೊಂದಿಗೆ ಪ್ರಶ್ನೆಪತ್ರಿಕೆಯ ಪ್ರತಿಗಳು ಜಾಲತಾಣಗಳಲ್ಲಿ ಹರಿದಾಡಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಎನ್.ಟಿ.ಎ, ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಶ್ನೆಪತ್ರಿಕೆಗೂ ನೀಟ್ ೨೦೨೪ರ ಪ್ರಶ್ನೆಪತ್ರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ಆರೋಪಗಳನ್ನು ಆಧಾರರಹಿತ ಎಂದಿದೆ.
ʼಪರೀಕ್ಷೆಯು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆದಿದೆ. ಪರೀಕ್ಷಾ ಕೇಂದ್ರದೊಳಗೆ ಯಾರಿಗೂ ಪ್ರವೇಶಿಸುವ ಅವಕಾಶವಿಲ್ಲʼ ಎಂದು NTA ಹಿರಿಯ ನಿರ್ದೇಶಕಿ ಸಾಧನಾ ಪರಿಚಾರ್ ತಿಳಿಸಿದರು.
ದೇಶದ ಸರ್ಕಾರಿ, ಖಾಸಗಿ ಮತ್ತು ಹೊರದೇಶದ ಕೆಲವು ಕಾಲೇಜುಗಳಲ್ಲಿ ವೈದ್ಯಕೀಯ ಪದವಿಗಾಗಿ ಈ ಪರೀಕ್ಷೆ ನಡೆಸಲಾಗುತ್ತಿದ್ದು, ದೇಶದ 571 ನಗರಗಳ ಹಾಗು ಹೊರದೇಶದ 14 ನಗರಗಳ ಒಟ್ಟು 4,750 ಪರೀಕ್ಷಾ ಕೇಂದ್ರಗಳಲ್ಲಿ 2024ರ NEET ಪರೀಕ್ಷೆ ನಡೆಯಿತು.