ನವದೆಹಲಿ: ಭಾರತ ಹಡಗು ನಿರ್ಮಾಣ ಮಾಡುವ ಕಂಟ್ರ್ಯಾಕ್ಟ್ ಒಂದನ್ನು ಗೆದ್ದುಕೊಂಡಿದ್ದು ರಷ್ಯಾಕ್ಕೆ 25 ಹಡಗುಗಳನ್ನು ನಿರ್ಮಿಸಿಕೊಡಲಿದೆ.
ಹೌದು. . . ಇತ್ತೀಚೆಗೆ ಭಾರತ ಸ್ವದೇಶಿ ನಿರ್ಮಾಣದ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದು ಸೇನೆಗೆ ಬೇಕಾದಂತಹ ಸಾಕಷ್ಟು ಸರಕುಗಳನ್ನು ದೇಶದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ. ನಮ್ಮಲ್ಲಿನ ಯುದ್ಧ ಸಾಮಾಗ್ರಿಗಳನ್ನು ಖರೀದಿಸಲು ವಿದೇಶಗಳಿಂದಲೂ ಬೇಡಿಕೆ ಹೆಚ್ಚುತ್ತಿರುವ ಕಾರಣ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹಾಗೆಯೇ ಇದು ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಇನ್ನಷ್ಟು ಬಲಪಡಿಸಲಿದೆ
ಜಾಗತಿಕ ಪಾಲುದಾರಿಕೆಯಲ್ಲಿ ಮೇಲುಗೈ ಸಾಧಿಸುತ್ತಿರುವ ಭಾರತ ಅದನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯೊಂದನ್ನು ಇಟ್ಟಿದೆ. ಭಾರತ ಇದೀಗ ಹಡಗು ನಿರ್ಮಾಣದ ಕಂಟ್ರ್ಯಾಕ್ಟ್ ಒಂದನ್ನು ಗೆದ್ದಿದ್ದು ರಷ್ಯಾಕ್ಕೆ 25 ಸರಕು ಸಾಗಿಸುವ ಹಡಗುಗಳನ್ನು ನಿರ್ಮಿಸಿಕೊಡಲಿದೆ. ಗೋವಾ ಶೀಪ್ಯಾರ್ಡ್ ಲಿಮಿಟೆಡ್ನಲ್ಲಿ ಸರಕು ಹಡಗುಗಳ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಈ ಒಪ್ಪಂದವು ಭಾರತದ ಹಡಗು ನಿರ್ಮಾಣ ಉದ್ಯಮಕ್ಕೆ ಗಮನಾರ್ಹವಾದ ಉತ್ತೇಜನ ನೀಡಲಿದೆ.