ಹೊಸದಿಲ್ಲಿ: ಈ ಹಿಂದೆ ಟೊಮೆಟೊ ದರ ಗಗನಕ್ಕೇರಿತ್ತು. ಇದೀಗ ಬೆಳ್ಳುಳ್ಳಿಯ ಸರದಿ. ಕೆಲವು ಪ್ರದೇಶಗಳಲ್ಲಿ ಬೆಳ್ಳುಳ್ಳಿಯ ದರ ಪ್ರತಿ ಕೆಜಿಗೆ ₹400ಕ್ಕೆ ತಲುಪಿದೆ. ಪೂರೈಕೆ ಕ್ಷೀಣಿಸಿರುವ ಕಾರಣ ಬೆಲೆ ಗಗನಕ್ಕೇರಿದೆ ಎನ್ನಲಾಗಿದೆ. ಕೆಲವು ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿಗೆ ₹300ರಿಂದ ₹400ರ ವರೆಗೆ ಮಾರಾಟವಾಗುತ್ತಿದೆ.
ವರ್ಷಾಂತ್ಯದವರೆಗೂ ಬೆಲೆಗಳು ಏರುವ ನಿರೀಕ್ಷೆಯಿದೆ. ಬೆಳ್ಳುಳ್ಳಿಯ ಸಗಟು ಬೆಲೆಗಳು ಹೆಚ್ಚಿನ ಏರಿಕೆ ಕಂಡಿದ್ದು, ಸಗಟು ಮಾರುಕಟ್ಟೆಗಳಲ್ಲಿ ₹130-140ಕ್ಕೆ ಮಾರಾಟವಾಗುತ್ತಿದೆ ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಕೆಜಿಗೆ ₹220-250ರ ಸಗಟು ದರದಲ್ಲಿ ಮಾರಾಟವಾಗುತ್ತಿದೆ.
ಮಸಾಲೆ ಬೆಳೆಗಳಾದ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಬೆಲೆಗಳು ಏರುತ್ತಿವೆ. ಬೆಳ್ಳುಳ್ಳಿ ಬೆಲೆ ಕೇವಲ ಒಂದು ವಾರದೊಳಗೆ ದ್ವಿಗುಣಗೊಂಡಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾನಿಗೊಳಗಾದ ಕಾರಣ ದೇಶದಾದ್ಯಂತ ಬೆಳ್ಳುಳ್ಳಿಯ ಪೂರೈಕೆ ಕ್ಷೀಣಿಸುತ್ತಿರುವುದು ಹೆಚ್ಚಿನ ಬೆಲೆಯ ಹಿಂದಿನ ಕಾರಣ.