ನವದೆಹಲಿ, ನ.4 : ದೀಪಾವಳಿಯ ಕೊಡುಗೆಯಾಗಿ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ತೆರಿಗೆ ಕಡಿತದಿಂದ ಜನಸಾಮಾನ್ಯರಿಗೆ ಲಾಭವಾಗುವ ಜೊತೆಗೆ ಹಣದುಬ್ಬರ ತಗ್ಗಲು ಸಹಕಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿರುವ ಅವರು, ಪ್ರಧಾನಿ ಅವರ ನಿರ್ಧಾರ ಅತ್ಯಂತ ಸೂಕ್ಷ್ಮವಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯ ನಡುವೆಯೂ ದೇಶಿಯ ಮಾರುಕಟ್ಟೆಯ ಮೇಲಿನ ಒತ್ತಡವನ್ನು ತಡೆದುಕೊಂಡು ಅಬಕಾರಿ ತೆರಿಗೆ ಕಡಿಮೆ ಮಾಡಿದ್ದಾರೆ. ಇದರಿಂದ ಹಣದುಬ್ಬರ ತಗ್ಗಲಿದೆ. ದಿನ ನಿತ್ಯದ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎಂದು ಅವರು ಹೇಳಿದರು.
ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ವ್ಯಾಟ್ ಕಡಿಮೆ ಮಾಡಿ ಜನ ಸಾಮಾನ್ಯರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.