ಪಾಟ್ನಾ: ವೇಗವಾಗಿ ಚಲಿಸುತ್ತಿದ್ದ ಎಸ್ ಯುವಿಯೊಂದು ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದ ಗಯಾ ಮತ್ತು ನಳಂದ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರಲ್ಲಿ 40 ವರ್ಷದ ಮಹಿಳೆ, 30 ವರ್ಷದ ಪುರುಷ ಮತ್ತು 10 ವರ್ಷದ ಬಾಲಕಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ ಯುವಿ ಚಾಲಕ ಸೇರಿದಂತೆ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಗಯಾ ಜಿಲ್ಲೆಯ ಮೆಹ್ಕರ್ ಬ್ಲಾಕ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ನಳಂದದ ಏಕಂಗರ್ಸರಾಯ್ ಬ್ಲಾಕ್ ನಿವಾಸಿಗಳಾಗಿದ್ದು, ರಾಜ್ಗಿರ್ ನ ಮಾಲ್ಮಾಸ್ ಜಾತ್ರೆಗೆ ಪವಿತ್ರ ಸ್ನಾನ ಮಾಡಲು ತೆರಳುತ್ತಿದ್ದರು.
ಬೆಳಿಗ್ಗೆ 6 ಗಂಟೆ ಸುಮಾರಿಗೆ ಸಿಗ್ರಾ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ.