ಮಧೇಪುರ : ದೇಶದ ಬಹುಸಂಖ್ಯಾತ ವಯಸ್ಕರು ಇನ್ನೂ ಎರಡನೇ ಡೋಸ್ ಲಸಿಕೆಯನ್ನೇಪಡೆದಿಲ್ಲ. ಆದರೆ ಬಿಹಾರದ(Bihar) 84 ವರ್ಷದ ವೃದ್ಧ ಬ್ರಹ್ಮದೇವ್ ಮಂಡಲ್, ತಾವು 11 ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, 12ನೇ ಡೋಸ್ ಲಸಿಕೆ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿದೆ.
ಮಧೇಪುರ ಜಿಲ್ಲೆಯ ಓರಾಯ್ ಗ್ರಾಮದ ನಿವಾಸಿಯಾದ ಇವರು ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿಯೂ ಹೌದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಡಲ್, ‘ಲಸಿಕೆಯಿಂದ ಬಹಳಷ್ಟು ಉಪಯೋಗವಾಗಿದೆ. ಹಾಗಾಗಿ ಪದೇ ಪದೇ ಲಸಿಕೆ ಪಡೆದೆ.
ಕಳೆದ ವರ್ಷ ಫೆ.13ರಂದು ಮೊದಲ ಡೋಸ್ ಸ್ವೀಕರಿಸಿದ್ದೆ. ಅನಂತರ ಡಿ.30ರ ಒಳಗೆ 11 ಡೋಸ್ ಲಸಿಕೆ ಪಡೆದೆ. ಲಸಿಕೆ ಪಡೆದ ದಿನಾಂಕ, ಸ್ಥಳವನ್ನೂ ಬರೆದಿಟ್ಟಿದ್ದೇನೆ. 8 ಬಾರಿ ಲಸಿಕೆ ಪಡೆಯಲು ನನ್ನ ಆಧಾರ್ ಮತ್ತು ಫೋನ್ ನಂಬರ್ ನೀಡಿದ್ದೆ. ನಂತರ ಮೂರು ಬಾರಿ ವೋಟರ್ ಐಡಿ ಮತ್ತು ಪತ್ನಿಯ ಮೊಬೈಲ್ ನಂಬರ್ ನೀಡಿದ್ದೆ’ ಎಂದು ತಿಳಿಸಿದ್ದಾರೆ.