ಶ್ರೀನಗರ: ಜಮ್ಮು ಕಾಶ್ಮೀರದ ರಾಜೋರಿ ಜಿಲ್ಲೆಯಲ್ಲಿ ಉಗ್ರರು ಹಾಗೂ ಭಾರತೀಯ ಯೋಧರ ಮಧ್ಯೆ ನಡೆಯುತ್ತಿರೋ ಗುಂಡಿನ ಚಕಮಕಿ ಮುಂದುವರಿದಿದೆ. ಭಯೋತ್ಪಾದಕರ ದಾಳಿಗೆ ಸೈನಿಕರು ಪ್ರತಿದಾಳಿ ಮಾಡಿದ್ದು, ಎನ್ಕೌಂಟರ್ನಲ್ಲಿ ಮತ್ತೋರ್ವ ಯೋಧ ಇಂದು ಕೊನೆಯುಸಿರೆಳೆದಿದ್ದಾರೆ.
ರಾಜೋರಿ ಜಿಲ್ಲೆಯ ಬಾಜಿ ಮಾಲ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅಡಗಿರುವ ಉಗ್ರರ ವಿರುದ್ಧ ಕಳೆದ 24 ಗಂಟೆಯಿಂದ ಎನ್ಕೌಂಟರ್ ನಡೆಯುತ್ತಿದೆ. ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ ಇದೀಗ 5ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಮೂವರು ಸೈನಿಕರು, ಇಬ್ಬರು ಕ್ಯಾಪ್ಟನ್ಗಳು ಇದ್ದಾರೆ.
ಇಬ್ಬರು ಕ್ಯಾಪ್ಟನ್ಗಳು ಮತ್ತು ಇಬ್ಬರು ಯೋಧರು ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ನಿನ್ನೆಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದು, ನಂತರ ಅವರನ್ನು ಉಧಂಪುರದಲ್ಲಿರುವ ಸೇನಾ ಕಮಾಂಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಭಾರತೀಯ ಸೇನಾ ಸಿಬ್ಬಂದಿ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಕೂಡ ಹತರಾಗಿದ್ದಾರೆ.
ರಾಜೌರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ರಾತ್ರಿಯಿಡೀ ಸ್ಥಗಿತಗೊಂಡಿದ್ದ ಗುಂಡಿನ ಚಕಮಕಿ ಇಂದು ಮತ್ತೆ ಆರಂಭವಾಗಿತ್ತು. ಎನ್ಕೌಂಟರ್ನಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ತಪ್ಪಿಸಿಕೊಳ್ಳದಂತೆ ಹೆಚ್ಚುವರಿ ಸೇನಾ ಸಿಬ್ಬಂದಿ ಅರಣ್ಯ ಪ್ರದೇಶವನ್ನು ಸುತ್ತುವರಿದಿದೆ. ರಾಜೌರಿ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ಇನ್ನೂ ಮುಂದುವರಿದಿದೆ.