ಭಾರತೀಯ ಸೇನೆಗೆ ಮತ್ತಷ್ಟು ಬಲ ನೀಡುವ, ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಖಂಡಾಂತರ ಕ್ಷಿಪಣಿ ಅಗ್ನಿ-5 ನ್ನು ಡಿ ಆರ್ ಡಿ ಒ ಯಶಸ್ವಿಯಾಗಿ ಪರೀಕ್ಷಿಸಿದೆ.
ಅತ್ಯಂತ ನಿಖರತೆಯೊಂದಿಗೆ 5,000 ಕಿ.ಮೀ ವ್ಯಾಪ್ತಿಯ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದ್ದು, ಇದು 50 ಟನ್ ತೂಕದ್ದಾಗಿದೆ.
ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಬುಧವಾರ ರಾತ್ರಿ 7:50 ರ ಸುಮಾರಿಗೆ ಪರೀಕ್ಷೆ ನಡೆಸಲಾಗಿದೆ. ಈ ಯಶಸ್ವಿ ಪ್ರಯೋಗವು ಭಾರತೀಯ ಸೇನೆಗೆ ಮತ್ತೊಂದು ಪ್ರತಿಷ್ಠೆಯ ಗರಿಯಾಗಿದೆ ಎಂದು ಸೇನೆ ಹೇಳಿದೆ.
ಮೂರು ಹಂತದ ಘನ ಇಂಧನ ಎಂಜಿನ್ ಹೊಂದಿರುವ ಈ ಕ್ಷಿಪಣಿಯು ಗುರಿಯನ್ನು ಅತ್ಯಂತ ನಿಖರವಾಗಿ ತಲುಪಿ ಧ್ವಂಸಗೊಳಿಸಬಲ್ಲದು. ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ಈ ಹಿಂದಿನ ನಿರ್ಧಾರಕ್ಕೆ ಇಂದಿಗೂ ಭಾರತ ಬದ್ಧವಾಗಿದೆ. ಹೀಗಾಗಿಯೇ ನಿಖರವಾಗಿ ಗುರಿ ಮುಟ್ಟಬಲ್ಲ ಖಂಡಾಂತರ ಕ್ಷಿಪಣಿಗಳಿಗೆ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಹೆಚ್ಚಿನ ಮಹತ್ವವಿದೆ.